ಯಾವುದೇ ಒಂದು ಚಿತ್ರ ರೂಪುಗೊಳ್ಳುವಾಗಲೂ ಪ್ರಧಾನವಾಗಿ ನಿರ್ಮಾಪಕರ ಸಹಕಾರವೇ ಮುಖ್ಯವಾಗುತ್ತೆ. ನಿರ್ದೇಶಕರ ಕನಸನ್ನು ಅರ್ಥ ಮಾಡಿಕೊಂಡು ಹಣಕಾಸಿನ ಮುಖ ನೋಡದೆ ಗ್ರೀನ್ ಸಿಗ್ನಲ್ ಕೊಡೋ ನಿರ್ಮಾಪಕರು ಸಿಗೋದು ಅಪರೂಪ. ಆದರೆ ಪಡ್ಡೆಹುಲಿ ಚಿತ್ರಕ್ಕೆ ಅಂಥಾ ಸಹೃದಯಿ ನಿರ್ಮಾಪಕರು ಸಿಕ್ಕಿದ್ದಾರೆ. ಇಡೀ ಚಿತ್ರವನ್ನು ದೃಷ್ಯಕಾವ್ಯವಾಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ನಿರ್ಮಾಪಕ ಎಂ ರಮೇಶ್ ರೆಡ್ಡಿಯವರ ಬಗ್ಗೆ ನಿರ್ದೇಶಕರು, ನಾಯಕ ಸೇರಿದಂತೆ ಒಂದಿಡೀ ಚಿತ್ರತಂಡವೇ ತುಂಬು ಅಭಿಮಾನ ಹೊಂದಿದೆ.
ಅಷ್ಟಕ್ಕೂ ಪಡ್ಡೆಹುಲಿ ಎಂಬ ಹೊಸಾ ಹುಡುಗ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಚಿತ್ರವನ್ನು ರಮೇಶ್ ರೆಡ್ಡಿಯವರು ನಿರ್ಮಾಣ ಮಾಡಿರೋ ರೀತಿಯೇ ಅಂಥಾದ್ದಿದೆ. ಅದರ ಕಥೆ ಕೇಳಿದರೆ ಅವರ ಬಗ್ಗೆ ತಾನೇತಾನಾಗಿ ಅಬಿಮಾನ ಮೂಡುತ್ತದೆ!
ಹೊಸಾ ಹೀರೋ ಅಂದರೇನೇ ಚಿತ್ರ ನಿರ್ಮಾಣದಿಂದ ಹಿಂದೆ ಸರಿಯುವವರೇ ಹೆಚ್ಚು. ಯಾರದ್ದೋ ಎಂಟ್ರಿಗೆ ತಮ್ಮ ಕಾಸನ್ನು ಪಣಕ್ಕಿಡಲು ಹೆಚ್ಚಿನವರು ರೆಡಿಯಿರೋದಿಲ್ಲ. ಆದರೆ ತೇಜಸ್ವಿನಿ ಎಂಟರ್ ಪ್ರೈಸಸ್ ಮೂಲಕ ಪಡ್ಡೆಹುಲಿಯನ್ನು ರಮೇಶ್ ರೆಡ್ಡಿಯವರು ಕನಸಿನಂತೆ ರೂಪಿಸಿದ್ದಾರೆ. ಅವರಿಗೆ ಅಂಥಾದ್ದೊಂದು ಪ್ರೀತಿ ಇಲ್ಲದೇ ಹೋಗಿದ್ದರೆ ಈ ಚಿತ್ರ ಹನ್ನೊಂದು ಹಾಡುಗಳೊಂದಿಗೆ ಈ ಪರಿಯಾಗಿ ಕ್ರೇಜ್ ಹುಟ್ಟಿಸಲು ಸಾಧ್ಯವೇ ಇರುತ್ತಿರಲಿಲ್ಲ.
ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸಾ ಹುಡುಗನ ಎಂಟ್ರಿಗೆ ಇಷ್ಟು ದೊಡ್ಡ ಮೊತ್ತ ಹೂಡಿರೋದು ಇದೇ ಮೊದಲ ಸಲ. ಅಂಥಾದ್ದೊಂದು ಗಟ್ಟಿತನವನ್ನ ನಿರ್ಮಾಪಕರು ಪ್ರದರ್ಶಿಸಿದ್ದಾರೆ. ಆ ನಂಬಿಕೆಗೆ ತಕ್ಕುದಾದ ಕಂಟೆಂಟ್ ಅನ್ನು ಪಡ್ಡೆಹುಲಿ ಹೊಂದಿದೆ. ಅದು ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತೆ ಅನ್ನೋದು ಚಿತ್ರತಂಡದ ಅಚಲ ನಂಬಿಕೆ.