ಮಂಡ್ಯ: “ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ, ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ, ಹೈನೋದ್ಯಮದಲ್ಲಿ ತೊಡಗಿರುವ ರೈತರಿಗೆ ಕಡಿಮೆ ದರದಲ್ಲಿ ಮೇವು ಸಿಗುವಂತೆ ಮಾಡಿ’ ಎಂಬ ಬೇಡಿಕೆ ರೈತ ಸಂವಾದದಲ್ಲಿ ಕೇಳಿ ಬಂದವು. ಚೌಡಗೋನಹಳ್ಳಿ ಗೇಟ್ ಬಳಿ ರೈತ ರೊಂದಿಗೆ ನಡೆದ ಸಂವಾದದಲ್ಲಿ ರೈತ ಮಹಿಳೆಯರು ಸಮಸ್ಯೆ ಹೇಳಿಕೊಂಡು ಕಣ್ಣೀರು ಹಾಕಿದ ಘಟನೆ ನಡೆಯಿತು.
ರೈತ ನಾಯಕಿ ನಂದಿನಿಜಯರಾಂ ಮಾತನಾಡಿ, ರೈತರಿಗೆ ಉಚಿತ ಹಣ ಬೇಡ. ಆದರೆ, ಆತ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಜತೆಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಬ್ಯಾಂಕುಗಳಿಂದ ರೈತರಿಗೆ ಸುಲಭ ವಾಗಿ ಸಾಲ ಸಿಗುವಂತಾಗಬೇಕು ಎಂದು ಹೇಳಿದರು.
ಕೆ.ಆರ್.ಪೇಟೆ ತಾಲೂಕಿನಿಂದ ಆಗಮಿಸಿದ್ದ ಪುಷ್ಪಾ ಎಂಬ ರೈತ ಮಹಿಳೆ ಭತ್ತದ ಗದ್ದೆಗೆ ನೀರು ಹಾಯಿಸಲು ಹೋದ ನನ್ನ ಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ. ಆತ ಬೆಳೆ ಬೆಳೆಯಲು 2 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದ ಎಂದು ಕಣ್ಣೀರು ಹಾಕಿದಳು. ಕಣ್ಣೀರು:ಹೈನೋದ್ಯಮ ನಂಬಿಕೊಂಡು ಜೀವನ ಸಾಗಿಸು ತ್ತಿರುವ ಗಿರಿಜಾ, ತನ್ನ ಪತಿ ಹಸುವಿಗೆ ಮೇವು ತರಲು ಹೋದಾಗ ಹಾವು ಕಚ್ಚಿ ಸಾವಿಗೀಡಾದರು.
ಹಸುಗಳನ್ನೇ ನಂಬಿದ್ದೇನೆ. ಹಸುಗಳಿಗಾಗಿ ಬಳಸುವ ಇಂಡಿ, ಬೂಸಾ, ಫೀಡ್ಸ್ ಬೆಲೆಗಳ ಹೆಚ್ಚಳ ದಿಂದ ಹಾಲು ಮಾರಾಟದಿಂದ ಬರುವ ಹಣವನ್ನು ಮೇವಿಗೆ ಹಾಕುವುದೇ ಆಗಿದೆ. ಇದಲ್ಲದೆ ಇಬ್ಬರು ಮಕ್ಕಳನ್ನು ಸಾಕುವ ಹೊಣೆ ನನ್ನ ಮೇಲಿದೆ. ಹಸುಗಳ ಆಕಸ್ಮಿಕ ಸಾವಿನಿಂದ ನಷ್ಟ ಉಂಟಾಗಿ 10 ಲಕ್ಷ ರೂ. ಸಾಲ ಮಾಡಿದ್ದೇನೆ ಎಂದು ಕಣ್ಣೀರು ಹಾಕಿದರು.
ಮಧ್ಯ ಪ್ರವೇಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಹಾಲು ಖರೀದಿಗೆ ನೀಡುತ್ತಿರುವ ಹಣ ಕಡಿಮೆಯಾಗಿದ್ದು, ರೈತ ಹಸು ಸಾಕಲು ಹೆಚ್ಚು ಹಣ ವ್ಯಯವಾಗುತ್ತಿದೆ. ಹೀಗಾಗಿ ರೈತರಿಗೆ ನಷ್ಟವಾಗುತ್ತಿದೆ ಎಂದು ರಾಹುಲ್ ಗಮನಕ್ಕೆ ತಂದರು.
ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ.ಸಿ.ಮೋಹನ್ ಕುಮಾರ್ ಮಾತನಾಡಿ, ತಾಲೂಕು ಹೇಮಾವತಿ ನಾಲೆಯ ಕೊನೆ ಭಾಗದಲ್ಲಿದ್ದು, ಕಡೆ ಭಾಗಕ್ಕೆ ನೀರು ಹರಿಸಲು ನಾಲೆಗಳ ಆಧುನೀಕರಣ ವಾಗಬೇಕು. ಜತೆಗೆ ನಾಲೆಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಹಣ ಬಿಡುಗಡೆ ಯಾಗಿಲ್ಲ ಎಂದು ಹೇಳಿದರು.
ಮದ್ದೂರಿನ ಅಲೋಕ ಮಾತನಾಡಿ, ಕಬ್ಬು ಬೆಳೆ ಯಲು ಟನ್‌ವೊಂದಕ್ಕೆ 3600 ರೂ. ಖರ್ಚಾಗುತ್ತಿದ್ದು, ಸಕ್ಕರೆ ಕಾರ್ಖಾನೆ ನೀಡುತ್ತಿರುವ ಹಣ ಸಾಲುತ್ತಿಲ್ಲ. ಜತೆಗೆ 3 ರಿಂದ 6 ತಿಂಗಳು 2 ವರ್ಷವಾದರೂ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹಣ ನೀಡದೆ ಕೋಟ್ಯಂತರ ಹಣ ಬಾಕಿ ಉಳಿಸಿಕೊಂಡಿವೆ ಎಂದರು.