Advertisement

ಸಂಚಾರಿ ವಿಜಯ್‌ ಯಾಮಾರಿದ್ದರೆ ಏನಾಗುತ್ತಿತ್ತು ಗೊತ್ತಾ?

03:21 PM Aug 01, 2018 | Team Udayavani |

ಸ್ವಲ್ಪ ಯಾಮಾರಿದ್ದರೂ ಅವರು ಅತೀ ಎತ್ತರದಲ್ಲಿದ್ದ ಆ ತೂಗು ಸೇತುವೆ ಮೇಲಿಂದ ಕೆಳಗೆ ರಭಸವಾಗಿ ಹರಿಯೋ ನದಿಯಲ್ಲಿ ಬೀಳುತ್ತಿದ್ದರು…ಇದು ನಟ ಸಂಚಾರಿ ವಿಜಯ್‌ ಅವರಿಗೆ ಸಂಬಂಧಿಸಿದ ಸುದ್ದಿ. ಹೌದು. ಎದೆ ಝಲ್‌ ಎನಿಸುವ ಈ ವಿಷಯ ಹೇಳುತ್ತಲೇ, ಕ್ಷಣ ಮೌನವಾದರು ಸಂಚಾರಿ ವಿಜಯ್‌. ಅಷ್ಟಕ್ಕೂ ಅವರಿಗೇನಾಯಿತು? ಆ ಘಟನೆ ಕುರಿತ ವಿವರ ಇದು. 

Advertisement

ಹೃಷಿಕೇಶ್‌ ಜಂಬಗಿ ನಿರ್ದೇಶನದ “ಪಾದರಸ’ ಚಿತ್ರದ ಹಾಡೊಂದರ ಚಿತ್ರೀಕರಣ ದೂರದ ಕೇರಳದಲ್ಲಿ ನಡೆಯುತ್ತಿತ್ತು. ಅಲ್ಲೇ ಸುಂದರವಾಗಿರುವ ತೂಗುಸೇತುವೆ ಮೇಲೆ ಚಿತ್ರಿಸುವ ಸಂದರ್ಭವಿತ್ತು. ಅಲ್ಲೇ ಇದ್ದಂತಹ ವಾಚ್‌ಮೆನ್‌ ಮತ್ತು ಸ್ಥಳೀಯರು, ಅಲ್ಲಿ ಹುಷಾರಾಗಿರಬೇಕು ಎಂದು ಎಚ್ಚರಿಸಿದ್ದಾರೆ. ಆದರೆ, ಚಿತ್ರತಂಡದವರು ಮುಂಜಾಗ್ರತೆ ವಹಿಸಿರುವುದಾಗಿ ಹೇಳಿಕೊಂಡಿದ್ದರು. ಕೊನೆಗೆ ಹಾಡಿನ ಚಿತ್ರೀಕರಣ ಶುರುವಾಗಿದೆ. ಒಂದು ತುಣಕಲ್ಲಿ ಸಂಚಾರಿ ವಿಜಯ್‌ ಪಲ್ಟಿ ಹೊಡೆಯಬೇಕಿತ್ತಂತೆ. 

ದೂರದಲ್ಲೆಲ್ಲೋ ಕ್ಯಾಮೆರಾ ಇಡಲಾಗಿದೆ. ಆ ತೂಗು ಸೇತುವೆ ಮೇಲೆ ಹಾಡುತ್ತ ಬಂದ ಸಂಚಾರಿ ವಿಜಯ್‌, ಹಾಗೊಮ್ಮೆ ಓಡುತ್ತಲೇ ಒಂದು ಪಲ್ಟಿ ಹೊಡೆದುಬಿಟ್ಟಿದ್ದಾರೆ. ಸೇತುವೆಯ ಎಡ್ಜ್ಗೆ ಅವರ ಕಾಲು ತಗುಲು ಸಿಲುಕಿಬಿಟ್ಟಿದೆ. ತಕ್ಷಣವೇ ಎಚ್ಚೆತ್ತುಕೊಂಡು ಸೇತುವೆ ಮೇಲೆ ಉರುಳಿಬಿಟ್ಟಿದ್ದಾರೆ. ಒಂದೇ ಕ್ಷಣ ಯಾಮಾರಿದ್ದರೂ, ಸಂಚಾರಿ ವಿಜಯ್‌ ಆಳವಾಗಿದ್ದ ನದಿಗೆ ಬೀಳುತ್ತಿದ್ದರಂತೆ. ಮೊದಲು ಅಲ್ಲಿದ್ದವರು ಬೇಡ ಅಂದಿದ್ದನ್ನು ನೆನಪಿಸಿಕೊಂಡ ಚಿತ್ರತಂಡ, ಕೊನೆಗೂ ಮತ್ತೂಂದು ಶಾಟ್‌ಗೆ ರೆಡಿಯಾಗಿ, ಆ ದೃಶ್ಯವನ್ನು ಪರಿಪೂರ್ಣಗೊಳಿಸಿದೆ.

ಕೇರಳದಲ್ಲಿ ನಡೆದ ಈ ಘಟನೆಯನ್ನು ಸಂಚಾರಿ ವಿಜಯ್‌ ಯಾಕೆ ಅಷ್ಟೊಂದು ನೆನಪಿಸಿಕೊಂಡು ಹೇಳಿದರು ಅನ್ನುವುದಕ್ಕೆ, ಅವರು ಮಲಯಾಳಂ ಚಿತ್ರದ ಚಿತ್ರೀಕರಣ ಸಂದರ್ಭದಲ್ಲೂ, ಅಂಥಧೆ ಘಟನೆ ನಡೆದಿತ್ತಂತೆ. ಅದ್ಯಾಕೋ ಕೇರಳಕ್ಕೂ ನನಗೂ ಆಗಿಬರೋದೇ ಇಲ್ಲವಲ್ಲ ಎಂಬ ಪ್ರಶ್ನೆಯನ್ನು ಅವರೇ ಕೇಳಿಕೊಂಡು ಸುಮ್ಮನಾಗಿದ್ದಾರೆ. ಅದೇನೆ ಇರಲಿ, “ಪಾದರಸ’ ಚಿತ್ರದ ಹಾಡಿನಲ್ಲಾದ ಆ ಘಟನೆಯನ್ನು ಇಂದಿಗೂ ಮರೆತಿಲ್ಲ ಸಂಚಾರಿ ವಿಜಯ್‌. 

ಸದ್ಯಕ್ಕೆ ಅವರು, “ಪಾದರಸ’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಕಾರಣ, ಅದು ಅವರ ಮೊದಲ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಹಿಂದಿನ ಸಂಚಾರಿ ವಿಜಯ್‌ ಅವರನ್ನು ಇಲ್ಲಿ ಕಾಣುವಂತಿಲ್ಲವಂತೆ. ಯಾಕೆಂದರೆ, ಇದೇ ಮೊದಲ ಸಲ ಅವರು ಪಕ್ಕಾ ಕಮರ್ಷಿಯಲ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅದೊಂಥರಾ ರಗಡ್‌ ಪಾತ್ರ. ಸುಳ್ಳು ಹೇಳ್ಳೋದು, ಪೋಲಿ ಮಾತುಗಳನ್ನಾಡೋದು, ಮೋಸ ಮಾಡೋದು ಎಲ್ಲವೂ ಅವರ ಸುತ್ತ ನಡೆಯೋ ಕಥೆಯಂತೆ. 

Advertisement

ಕಥೆ ಕೇಳಿದಾಗ ಇಷ್ಟವಾಗಿ ಅಡ್ವಾನ್ಸ್‌ ಪಡೆದ ಸಂಚಾರಿ ವಿಜಯ್‌, ಪೂರ್ತಿ ಸ್ಕ್ರಿಪ್ಟ್ ಕೇಳಿದಾಗ, ಎಲ್ಲೋ ಒಂದು ಕಡೆ ಭಯಗೊಂಡಿದ್ದಾರೆ. ಕಾರಣ, ಅದರಲ್ಲಿದ್ದ ಕೆಲ ಸೀನ್ಸ್‌, ಡೈಲಾಗ್ಸ್‌. ಆದರೆ, ತಾನೊಬ್ಬ ನಟನಾಗಿ ಅದನ್ನು ಪೂರ್ಣಗೊಳಿಸಿದ್ದೇನೆ ಎನ್ನುವ ಅವರು, ಮೊದಲರ್ಧ ಚಿತ್ರ ನೋಡಿದಾಗ, ವಿಜಯ್‌ ಹೀಗಾ ಎಂಬ ಪ್ರಶ್ನೆ ಬರುತ್ತೆ, ದ್ವಿತಿಯಾರ್ಧದಲ್ಲಿ ಖಂಡಿತವಾಗಿಯೂ ಕಣ್ತುಂಬಿ ಬರುತ್ತೆ ಅಂತ ಹೇಳಿ ಸುಮ್ಮನಾಗುವ ಸಂಚಾರಿ ವಿಜಯ್‌, ಪಾತ್ರವನ್ನು ನೋಡಿದಾಗ, ಅವರಿಗೆ ತಮ್ಮ ಹಳೆಯದೆಲ್ಲಾ ನೆನಪಾಗಿದೆ. ಅವರು ಹಳ್ಳಿಯಿಂದ ಬಂದವರು. ಮನೆಯಲ್ಲಿ ಹಣ ಕದ್ದು ಓಡಿ ಬಂದು ಬೆಂಗಳೂರಿನ ಬರ್ಮಾ ಬಜಾರ್‌, ನ್ಯಾಷನಲ್‌ ಮಾರ್ಕೆಟ್‌ನಲ್ಲಿ ಸೆಕೆಂಡ್‌ ಹ್ಯಾಂಡಲ್‌ ಶೂಸ್‌, ವಾಚ್‌, ಬಟ್ಟೆ ಖರೀದಿಸಿ, ಊರಿಗೆ ಹೋಗಿ ಶೋಕಿ ಮಾಡಿದ್ದರಂತೆ. ಅದೇ ಪಾತ್ರವನ್ನು “ಪಾದರಸ’ ನೆನಪಿಸಿತಂತೆ.

Advertisement

Udayavani is now on Telegram. Click here to join our channel and stay updated with the latest news.

Next