Advertisement

ಪ್ಯಾಕ್‌ಗಳ ಗಣಕೀಕರಣ, ಆನ್‌ಲೈನ್‌ ಬ್ಯಾಂಕಿಂಗ್‌

12:16 PM Jan 09, 2022 | Team Udayavani |

ಕೋಲಾರ: ಅವಿಭಜಿತ ಜಿಲ್ಲೆಯ ಪ್ಯಾಕ್ಸ್‌ಗಳ ಸಂಪೂರ್ಣ ಗಣಕೀಕರಣದ ಮೂಲಕ ಆನ್‌ಲೈನ್‌ ಬ್ಯಾಂಕಿಂಗ್‌, ಕಾಗದ ರಹಿತ ಲೆಕ್ಕಪತ್ರ ನಿರ್ವಹಣೆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್‌ ಐತಿಹಾಸಿಕ ಸಾಧನೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ನಗರದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಶನಿವಾರ ಅವಿಭಜಿತ ಜಿಲ್ಲೆಯ ಬ್ಯಾಂಕ್‌, ಸೊಸೈಟಿ ಸಿಬ್ಬಂದಿಯೊಂದಿಗೆ ಆನ್‌ಲೈನ್‌ನಲ್ಲಿ ಪ್ಯಾಕ್ಸ್‌ಗಳ ಗಣಕೀಕರಣದ ಪ್ರಗತಿ ಪರಿಶೀಲನಾ ಸಭೆ ನಡೆಸಿಮಾತನಾಡಿದ ಅವರು, ಪ್ಯಾಕ್ಸ್‌ ವ್ಯವಸ್ಥೆ ಗಣಕೀಕರಣಗೊಳಿಸುವ ಎರಡು ವರ್ಷಗಳ ಪ್ರಯತ್ನ ಫಲ ನೀಡಿದ್ದು, ಜ.15 ನಂತರ ಗಣಕೀಕೃತ ವಹಿವಾಟು ಜೀವ ಪಡೆದುಕೊಳ್ಳಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲಾ ಬ್ಯಾಂಕ್‌ ಶಾಖೆಗಳ ಸಿಬ್ಬಂದಿ, ವಿ-ಸಾಫ್ಟ್‌ ಸಂಸ್ಥೆಯ ನೌಕರರಿಗೆ ಧನ್ಯವಾದ ಸಲ್ಲಿಸಿದರು.

ಒಂದೆರಡು ದಿನಗಳಲ್ಲಿ ಮುಕ್ತಾಯ: ಅವಿಭಜಿತ ಜಿಲ್ಲೆಯ 194 ಪ್ಯಾಕ್ಸ್‌ಗಳ ಪೈಕಿ 175 ಸೊಸೈಟಿಗಳ ಗಣಕೀಕರಣ ಮುಗಿದಿದೆ, 13 ಸೊಸೈಟಿಗಳ ಗಣಕೀಕರಣ ಪ್ರಗತಿಯಲ್ಲಿದ್ದು, ಒಂದೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಉಳಿದ 19 ಪ್ಯಾಕ್ಸ್‌ಗಳ ಆಡಿಟ್‌ ಪ್ರಕ್ರಿಯೆ ವಿಳಂಬವಾಗಿದೆ. ಅವುಗಳನ್ನು ಈತಿಂಗಳ ಅಂತ್ಯದೊಳಗೆ ಗಣಕೀಕೃತಗೊಳಿಸಲಿದ್ದು, ಸಹಕಾರಿ ಬ್ಯಾಂಕಿಂಗ್‌ ಇತಿಹಾಸದಲ್ಲಿ ಇದೊಂದು ಚರಿತ್ರಾರ್ಹ ಸಾಧನೆ ಆಗಲಿದೆ ಎಂದು ವಿವರಿಸಿದರು.

ಸಿಇಒಗಳಿಗೆ ತರಾಟೆ: ಮಾಲೂರು ತಾಲೂಕಿನ ಟೇಕಲ್‌, ನೂಟ್‌ವೇ, ಚಿಕ್ಕಬಳ್ಳಾಪುರ ಕಸಬಾ ಸೊಸೈಟಿ, ಗೌರಿಬಿದನೂರು ತಾಲೂಕಿನ ಭತ್ತನಹಳ್ಳಿ, ಚಿಂತಾಮಣಿ ತಾಲೂಕಿನ ಯಗವಕೋಟೆ, ಟಿ.ಗೊಲ್ಲಹಳ್ಳಿಸೊಸೈಟಿಗಳ ಆಡಿಟ್‌ ಪೆಂಡಿಂಗ್‌ ಇರುವ ಕುರಿತು ಸೊಸೈಟಿ ಸಿಇಒ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಆನ್‌ಲೈನ್‌ನಲ್ಲೇ ಪಡೆಯಿರಿ: ಗಣಕೀಕರಣದಿಂದಾಗಿ ವಹಿವಾಟು ಸುಲಭಗೊಳ್ಳುವುದರ ಜೊತೆಗೆ ಸಾಲ ವಿತರಣೆ, ಬಡ್ಡಿ, ಸಾಲ ಮನ್ನಾ, ಸಾಲ ಪಾವತಿಯಂತಹ ಯಾವುದೇ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ಕ್ಷಣದಲ್ಲಿ ಪಡೆಯಲು ಅವಕಾಶ ಲಭಿಸಲಿದೆ. ಅಫೆಕ್ಸ್‌ ಬ್ಯಾಂಕ್‌, ಸರ್ಕಾರ, ನಬಾರ್ಡ್‌ಗೆ ನೀಡಬೇಕಾದ ಮಾಹಿತಿಗಾಗಿ ಪ್ಯಾಕ್ಸ್‌ಗಳನ್ನು ಕೇಳಿ ಕಾಯುವಂತಿಲ್ಲ, ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು ಎಂದು ಹೇಳಿದರು.

ಸಾಧಕ ಸಿಬ್ಬಂದಿಗೆ ಅಭಿನಂದನೆ: ಪ್ಯಾಕ್ಸ್‌ಗಳ ಗಣಕೀಕರಣ ಮುಕ್ತಾಯದ ಹಂತದಲ್ಲಿದ್ದು, ಕೆಲವು ಕಡೆ ಇರುವ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿ ಜ.15ರೊಳಗೆ ಅಂತಿಮಗೊಳಿಸುವಂತೆ ಸೂಚಿಸಿದ ಅವರು, ರಜೆಯಿದ್ದರೂ, ಕರ್ತವ್ಯ ನಿರ್ವಹಿಸಿ ಈ ಕಾರ್ಯ ಮುಗಿಸಿಕೊಡಿ ಎಂದು ತಾಕೀತು ಮಾಡಿದರು.

ಗಣಕೀಕೃತ ವಹಿವಾಟು ಮುಗಿಸುವಲ್ಲಿ ಶ್ರಮಿಸಿದ ಬ್ಯಾಂಕ್‌, ವಿ-ಸಾಫ್ಟ್‌ ಸಿಬ್ಬಂದಿ, ಸೊಸೈಟಿ ಸಿಇಒಗಳು ಸೇರಿ ದುಡಿದವರನ್ನು ಫೆಬ್ರವರಿ ಮೊದಲ ವಾರ ಸಭೆ ಕರೆದು ಅಭಿನಂದಿಸುವುದಾಗಿ ತಿಳಿಸಿದರು.

ಕಾಗದ ರಹಿತ ಬ್ಯಾಂಕಿಂಗ್‌ ಸೇವೆ: ಡಿಸಿಸಿ ಬ್ಯಾಂಕಿನಲ್ಲಿ ನೆಟ್‌ ಬ್ಯಾಂಕಿಂಗ್‌ ಆರಂಭಿಸಿದ್ದು, ಗ್ರಾಹಕರಿಗೆ ಯಾವುದೇ ಗುಪ್ತ ಶುಲ್ಕ ವಿಧಿಸದೇ ಸೌಲಭ್ಯ ಒದಗಿಸುತ್ತಿದ್ದೇವೆ, ಬ್ಯಾಂಕಿಗೆ ಹಣ ಪಾವತಿ, ಡ್ರಾ ಮತ್ತಿತರ ವಹಿವಾಟಿನ ಮಾಹಿತಿ, ತಮ್ಮ ಉಳಿತಾಯ ಖಾತೆಯ ಇಡೀ ಇತಿಹಾಸವನ್ನು ಬ್ಯಾಂಕಿನ ಆ್ಯಪ್‌ನಲ್ಲಿ ಕೇವಲ ಒಂದು ಕ್ಲಿಕ್‌ ಮಾಡಿ ದಿನದ 24 ಗಂಟೆಯೂ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್‌ ಹಾಜರಿದ್ದು, ಗಣಕೀಕರಣ ಪ್ರಕ್ರಿಯೆ ಶೀಘ್ರ ಮುಗಿಸುವಂತೆ ಪ್ಯಾಕ್ಸ್‌ಗಳ ಸಿಇಒಗಳು, ಜವಾಬ್ದಾರಿ ಹೊತ್ತ ವಿ-ಸಾಫ್ಟ್‌ ಸಿಬ್ಬಂದಿ, ಶಾಖಾ ಸಿಬ್ಬಂದಿಗೆ ಸೂಚನೆ ನೀಡಿದರು. ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ನಾಗೇಶ್‌,ಅಧಿ ಕಾರಿಗಳಾದ ಹುಸೇನ್‌ ದೊಡ್ಡಮನಿ, ಅರುಣ್‌ಕುಮಾರ್‌, ಪದ್ಮಮ್ಮ, ತಿಮ್ಮಯ್ಯ, ಬೇಬಿ ಶಾಮಿಲಿ,ಹ್ಯಾರೀಸ್‌, ನವೀನ್‌, ವಿನಯ್‌ಪ್ರಸಾದ್‌, ಶುಭಾ, ಭಾನುಪ್ರಕಾಶ್‌, ಯಲ್ಲಪ್ಪರೆಡ್ಡಿ, ಮಂಗಳಗೌರಿ, ಸೌಮ್ಯಾ ಮತ್ತಿತರರಿದ್ದರು.

ಪ್ಯಾಕ್ಸ್‌ಗಳ ಗಣಕೀಕರಣ ಬ್ಯಾಂಕಿನ ಇತಿಹಾಸದಲ್ಲೇ ಕ್ರಾಂತಿಕಾರಿ ತೀರ್ಮಾ ನವಾಗಲಿದೆ, ಭ್ರಷ್ಟಾಚಾರ ಕೊನೆಗೊಳ್ಳಲಿದೆ. ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next