ಕುಂದಾಪುರ: ಆಟೋ ರಿಕ್ಷಾ ಚಾಲಕರಿಗೆ ಕೋವಿಡ್ ಪರಿಹಾರ ನಿಧಿಯಲ್ಲಿ 5 ಸಾವಿರ ರೂ.ಗಳನ್ನು ರಾಜ್ಯ ಸರಕಾರ ಘೋಷಿಸಿದ್ದು ಬ್ಯಾಜ್ ಇಲ್ಲದವರಿಗೂ ಪರಿಹಾರ ಧನ ನೀಡುವಂತೆ ಮುಖ್ಯ ಮಂತ್ರಿಗಳು ಸೂಚಿಸಿದ್ದಾರೆ. ಅರ್ಜಿ ಭರ್ತಿ ಮಾಡುವ ಆ್ಯಪ್ ಕುರಿತು ದೂರುಗಳಿದ್ದು ಸರಿಪಡಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬಂದಿಗೆ ಕೋವಿಡ್ ಪಾಸಿಟಿವ್ ಬರುತ್ತಿರುವ ಪ್ರಕರಣಗಳು ವರದಿ ಯಾಗು ತ್ತಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಕೊರೊನಾ ಪ್ರಕರಣಗಳು ಹೆಚ್ಚಾದಂತೆ ಅಗತ್ಯವುಳ್ಳ ಆಸ್ಪತ್ರೆ ಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ರಾಜ್ಯ ಸರಕಾರ ಸಮರ್ಥವಾಗಿ ನಿಭಾಯಿಸಲಿದೆ. ಕೊರೊನಾ ಪ್ರಕರಣಗಳ ಕುರಿತಾದ ಸಚಿವರ ಹೇಳಿಕೆಗಳಲ್ಲಿ ಗೊಂದಲ ಇರಬಹುದು. ಆದರೆ ಸರಕಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಪ್ರಶ್ನೆಗಳಿಗೆ ಸ್ಪಷ್ಟಪಡಿಸಿದರು.
ಡಾಟಾ ಎಂಟ್ರಿ: ಬದಲಿ ವ್ಯವಸ್ಥೆ
ಮೀನುಗಾರರ ಸಾಲ ಮನ್ನಾದಲ್ಲಿ 23 ಸಾವಿರ ಫಲಾನುಭವಿಗಳ ಪೈಕಿ 19,700 ಉಡುಪಿ ಜಿಲ್ಲೆ, 2 ಸಾವಿರ ದ.ಕ., 2 ಸಾವಿರದಷ್ಟು ಉ.ಕ. ದವರಿದ್ದಾರೆ. ಭೂಮಿ ತಂತ್ರಾಂಶಕ್ಕೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಬಂದಿ ಕೊರತೆಯಿದೆ ಎಂಬ ಕಾರಣಕ್ಕಾಗಿ ಮೀನು ಗಾರಿಕಾ ಸೊಸೈಟಿಯ ಸಿಬಂದಿಯನ್ನು ಕಳುಹಿಸಿ ಡಾಟಾ ಎಂಟ್ರಿ ಮಾಡಿಸಲಾಗಿದ್ದು ಸೋಮವಾರಕ್ಕೆ 19 ಸಾವಿರ ಎಂಟ್ರಿಗಳಾಗಿವೆ ಎಂದರು.
40 ಕೋ.ರೂ. ಡೀಸೆಲ್ ಸಬ್ಸಿಡಿಗೆ ಬೇಡಿಕೆ ಯಿದ್ದು ಎರಡು ದಿನಗಳ ಹಿಂದೆ 25 ಕೋ.ರೂ. ಬಂದಿದೆ. 15 ಕೋ.ರೂ.ಗಳನ್ನು ಜನವರಿಯಲ್ಲಿ ಮೀನುಗಾರರ ಖಾತೆಗೆ ಜಮೆ ಮಾಡಲಾಗಿತ್ತು. ಕುಂದಾಪುರದ ಕೋಡಿ ಮರಳು ದಿಬ್ಬ ತೆರವು ಕಾಮಗಾರಿಗೆ 1 ಕೋ.ರೂ. ಬೇಡಿಕೆ ಇಡಲಾಗಿದ್ದು ಹಣಕಾಸು ಇಲಾಖೆ ಯಲ್ಲಿ ಕಡತ ಇದೆ. ಕುಂದಾಪುರದಲ್ಲಿ ಬಂದರು ಇಲಾಖೆಗೆ 20 ಸೆಂಟ್ಸ್ ನಿವೇಶನ ಮಂಜೂ ರಾಗಿದ್ದು 10 ಕೋ.ರೂ. ಬಿಡುಗಡೆಯಾಗಿದೆ. 2 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಯಾಗಲಿದೆ. 3 ವರ್ಷಗಳಿಂದ ಬಾರದೇ ಇದ್ದ ಉಳಿತಾಯ ಪರಿಹಾರ ಯೋಜನೆಯ ಹಣ ಈಗ ಕೇಂದ್ರದಿಂದ 5.5 ಕೋ.ರೂ., ರಾಜ್ಯದಿಂದ 4.5 ಕೋ.ರೂ. ಬಿಡುಗಡೆಯಾಗಿದೆ ಎಂದರು.