Advertisement

ಭಾರತ ತಲುಪಿದ ಕೊನೆಯ ರಫೇಲ್‌ ವಿಮಾನ

08:45 PM Dec 15, 2022 | Team Udayavani |

ನವದೆಹಲಿ: ಫ್ರಾನ್ಸ್‌ನಿಂದ ಬರಬೇಕಾಗಿದ್ದ ಕೊನೆಯ ರಫೇಲ್‌ ಯುದ್ಧ ವಿಮಾನ ಗುರುವಾರ ಭಾರತದಲ್ಲಿ ಲ್ಯಾಂಡ್‌ ಆಗಿದೆ. ಈ ಮೂಲಕ ಫ್ರಾನ್ಸ್‌ನಿಂದ 36 ರಫೇಲ್‌ ಜೆಟ್‌ಗಳನ್ನು ಖರೀದಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.

Advertisement

ಫ್ರಾನ್ಸ್‌ನಿಂದ ಬರುವ ದಾರಿ ಮಧ್ಯೆ ಯುಎಇ ವಾಯುಪಡೆ ಟ್ಯಾಂಕರ್‌ ಮೂಲಕ ಇಂಧನ ಮರುಪೂರಣ ಮಾಡಲಾಯಿತು. ಅಲ್ಲಿಂದ ನಂತರ ನೇರವಾಗಿ ರಫೇಲ್‌ ಭಾರತದ ನೆಲವನ್ನು ಸ್ಪರ್ಶಿಸಿತು. ಇದರ ಬೆನ್ನಲ್ಲೇ, “ಫೀಟ್‌ ಡ್ರೈ! ದಿ ಪ್ಯಾಕ್‌ ಈಸ್‌ ಕಂಪ್ಲೀಟ್‌’ ಎಂದು ವಾಯುಪಡೆ ಟ್ವೀಟ್‌ ಮಾಡಿದೆ. ಇನ್ನು, ಭಾರತದಲ್ಲಿರುವ ಫ್ರಾನ್ಸ್‌ ರಾಯಭಾರಿ ಇಮ್ಯಾನುವಲ್‌ ಲೆನೈನ್‌ ಕೂಡ ಟ್ವೀಟ್‌ ಮಾಡಿ, “ಭಾರತದ ಮಣ್ಣಿನಲ್ಲಿ ಎಲ್ಲ 36 ರಫೇಲ್‌ಗ‌ಳನ್ನು ನೋಡಲು ಹೆಮ್ಮೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

2016ರಲ್ಲೇ ಕೇಂದ್ರ ಸರ್ಕಾರವು 60 ಸಾವಿರ ಕೋಟಿ ರೂ.ಗೆ 36 ರಫೇಲ್‌ ವಿಮಾನಗಳನ್ನು ಖರೀದಿಸುವ ಕುರಿತು ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಹಿಂದೆಯೇ ಬಂದಿದ್ದ 35 ವಿಮಾನಗಳನ್ನು ಸದ್ಯ ಹರ್ಯಾಣದ ಅಂಬಾಲ ಮತ್ತು ಪಶ್ಚಿಮ ಬಂಗಾಲದ ಹಶಿಮಾರಾದಲ್ಲಿ ಇಡಲಾಗಿದೆ.

ದೇಶೀಯ ಉತ್ಪಾದನೆ:

ಇನ್ನು ಮುಂದೆ, ನಾಗ್ಪುರದಲ್ಲಿರುವ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯಲ್ಲಿ ದೇಶೀಯವಾಗಿ ರಫೇಲ್‌ನ 5 ಬಿಡಿಭಾಗಗಳ ಉತ್ಪಾದನೆ ಆರಂಭವಾಗಲಿದೆ. ನಂತರ ಆ ಭಾಗಗಳನ್ನು ಫ್ರಾನ್ಸ್‌ಗೆ ಕಳುಹಿಸಿ, ಅಲ್ಲಿ ರಫೇಲ್‌ಗೆ ಅವುಗಳನ್ನು ಅಳವಡಿಸಲಾಗುತ್ತದೆ. 2020ರಿಂದಲೇ ಅದಕ್ಕೆ ಸಂಬಂಧಿಸಿದ ಕೆಲಸಗಳು ಶುರುವಾಗಿವೆ.

Advertisement

2 ದಿನಗಳ ಸಮರಾಭ್ಯಾಸ:

ಅತ್ತ ರಫೇಲ್‌ ಜೆಟ್‌ಗಳ ಪೂರೈಕೆ ಪೂರ್ಣಗೊಳ್ಳುತ್ತಿದ್ದಂತೆಯೇ, ಇತ್ತ ಈಶಾನ್ಯ ವಲಯವನ್ನು ಆವರಿಸುವಂತೆ 2 ದಿನಗಳ ಸಮರಾಭ್ಯಾಸವನ್ನು ವಾಯುಪಡೆ ಕೈಗೊಂಡಿದೆ. ಸುಖೋಟ್‌-30ಎಂಕೆಐ ಜೊತೆಗೆ 2ನೇ ಹಂತದಲ್ಲಿ ಬಂದಿದ್ದ ರಫೇಲ್‌ ವಿಮಾನಗಳು ಕೂಡ ಈ ಕವಾಯತಲ್ಲಿ ಭಾಗಿಯಾಗಲಿವೆ ಎಂದು ಮೂಲಗಳು ತಿಳಿಸಿವೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಮತ್ತು ಚೀನಾ ಸೇನೆ ನಡುವಿನ ಘರ್ಷಣೆ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿರುವುದು ವಿಶೇಷ.

 

Advertisement

Udayavani is now on Telegram. Click here to join our channel and stay updated with the latest news.

Next