Advertisement

ಹಿರಿಯ ಸಾಹಿತಿ ಎನ್. ಪಿ. ಭಟ್ಟ ವಿಧಿವಶ

01:34 PM Dec 29, 2019 | keerthan |

ಧಾರವಾಡ:  ಹಿರಿಯ ಸಾಹಿತಿ ಮತ್ತು ನಿವೃತ್ತ ಆದಾಯ ತೆರಿಗೆ ಆಯುಕ್ತ ಎನ್. ಪಿ. ಭಟ್ಟ (88) ರವಿವಾರ ನಸುಕಿನ ಜಾವ ಇಲ್ಲಿಯ ನಾರಾಯಣಪುರದಲ್ಲಿರುವ ತಮ್ಮ ಸ್ವಗೃಹ `ಅವನಿ ಯಲ್ಲಿ ನಿಧನ ಹೊಂದಿದರು.

Advertisement

ಅವರು ತಮ್ಮ ಪತ್ನಿ ನಿವೃತ್ತ ಪ್ರಾಧ್ಯಾಪಕಿ ಡಾ. ಯಶೋದಾ ಭಟ್ಟ ಮತ್ತು ಸೊಸೆ ಸುಮಂಗಲಾ ಭಟ್ಟ ಅವರನ್ನು ಅಗಲಿದ್ದಾರೆ.

ಉತ್ತಮ ಬರಹಗಾರರು, ಅರ್ಥಶಾಸ್ತ್ರಜ್ಞರು ಮತ್ತು ಆದಾಯ ತೆರಿಗೆ ಆಯುಕ್ತರಾಗಿದ್ದ ಭಟ್ಟರು ತಮ್ಮ ನಿವೃತ್ತಿಯ ನಂತರ ಧಾರವಾಡದಲ್ಲಿ ನೆಲೆಸಿ ಸಾಹಿತ್ಯ, ಸಂಗೀತ, ಕಲೆ ಮತ್ತು ಸಮಾಜ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅವನಿ ರಸಿಕರ ರಂಗ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ದಶಕಕ್ಕೂ ಹೆಚ್ಚು ಕಾಲ ಸಾಂಸ್ಕೃತಿಕ, ಸಾಹಿತ್ಯಿಕ, ಸಂಗೀತ ಕಲೆಗಳನ್ನು ಶ್ರೀಮಂತಗೊಳಿಸಲು ಶ್ರಮಿಸಿದ್ದರು. ಅನೇಕ ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಅವನಿ ರಸಿಕರ ರಂಗದ ಮೂಲಕ ವೇದಿಕೆ ಒದಗಿಸಿ ಪ್ರತಿಭಾ ಪ್ರದರ್ಶನಕ್ಕೆ ನೆರವಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ದತ್ತಿನಿಧಿ ಉಪನ್ಯಾಸ ಮಾಲಿಕೆಗೆ ನೆರವಾಗಿದ್ದರು. ಜ್ಞಾನಪೀಠ ವಿಜೇತ ಪ್ರೊ. ವಿ.ಕೃ. ಗೋಕಾಕ ಅವರ ಅಳಿಯನಾಗಿದ್ದ ಭಟ್ಟರು ಪ್ರಕಾಶನ ಕ್ಷೇತ್ರದಲ್ಲೂ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ರಂಜನ ಭಟ್ಟ, ನಾರಂಗಿ ಭಟ್ಟ ಎಂಬ ಕಾವ್ಯನಾಮದಿಂದ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಗ್ರಾಹಕರ ವೇದಿಕೆಯ ಅಧ್ಯಕ್ಷರಾಗಿದ್ದ ಭಟ್ಟರು ಗ್ರಾಹಕರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ವಿವಿಧ ರಂಗಗಳಲ್ಲಿ ಅವರ ಸೇವೆಯನ್ನು ಗುರುತಿಸಿದ ಸರಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಭಟ್ಟರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೊಡಮಾಡಿ ಗೌರವಿಸಿವೆ.

ಭಟ್ಟರ ನಿಧನವಾರ್ತೆ ತಿಳಿಯುತ್ತಿದ್ದಂತೆ ಅನೇಕ ಗಣ್ಯರು, ಸಾಹಿತಿ, ಕಲಾವಿದರು ಮತ್ತು ರಾಜಕೀಯ, ಸಾಮಾಜಿಕ ಧುರೀಣರು ಅವರ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮಧ್ಯಾಹ್ನ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಭಟ್ಟರ ಅಂತ್ಯಕ್ರಿಯೆ ನೆರವೇರಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next