ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಸಿಬಿಐ ಬುಧವಾರ ರಾತ್ರಿ ನಾಟಕೀಯ ಬೆಳವಣಿಗೆಯಲ್ಲಿ ಬಂಧಿಸಿತ್ತು. ಯುಪಿಎ ಸರಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ಚಿದಂಬರಂ ಅವರು ಉದ್ಘಾಟಿಸಿದ್ದ ಸಿಬಿಐ ಕಚೇರಿಯಲ್ಲಿಯೇ ರಾತ್ರಿ ಕಳೆದಿದ್ದಾರೆ!
ಸೆಂಟ್ರಲ್ ದೆಹಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿ ಸಂಕೀರ್ಣವನ್ನು 2011ರ ಜೂನ್ 30ರಂದು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬರಂ ಉದ್ಘಾಟಿಸಿದ್ದರು. ಅಂದು ಚಿದಂಬರಂ ಉದ್ಘಾಟಿಸಿದ ಸಿಬಿಐ ಕಚೇರಿಯ ಕಸ್ಟಡಿಯಲ್ಲಿಯೇ ರಾತ್ರಿ ಕಳೆದಿರುವ ಹಿನ್ನೆಲೆಯಲ್ಲಿ ಅಂದಿನ ವಿಡಿಯೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಿಬಿಐ ಕೇಂದ್ರ ಕಚೇರಿ ಉದ್ಘಾಟಿಸಿ ವಿಸಿಟರ್ಸ್ ಪುಸ್ತಕದಲ್ಲಿ ಚಿದಂಬರಂ ಅವರು, 1985ರಿಂದ ಸಿಬಿಐ ಜತೆ ನಿಕಟವಾಗಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಭಾರತದ ಪ್ರಮುಖ ತನಿಖಾ ಸಂಸ್ಥೆ ಹೊಸ ಸಂಕೀರ್ಣಕ್ಕೆ ಬಂದಿರುವುದನ್ನು ನೋಡುವುದೇ ಹೆಮ್ಮೆಯಾಗಿದೆ. ಸಿಬಿಐ ಇನ್ನಷ್ಟು ಮತ್ತಷ್ಟು ಬಲಗೊಳ್ಳಬೇಕು..ಇದು ನಮ್ಮ ಆಡಳಿತ ವ್ಯವಸ್ಥೆಯ ಪ್ರಮುಖ ಕಂಬವಾಗಿದೆ ಎಂದು ಬರೆದಿದ್ದರು.
ಸಿಬಿಐಯ ನೂತನ ಕೇಂದ್ರ ಕಚೇರಿಯ ಉದ್ಘಾಟನೆ ಬಳಿಕ ಹವಾನಿಯಂತ್ರಿತ ಕೋಣೆಯನ್ನು ಹೊಂದಿರುವ ಕಟ್ಟಡವನ್ನು ಚಿದಂಬರಂ ಜೊತೆ ಎಲ್ಲಾ ಸಚಿವರು ವೀಕ್ಷಿಸಿದ್ದರು. ಅದರಲ್ಲಿಯೂ ಕೆಳ ಅಂತಸ್ತಿನಲ್ಲಿರುವ ಜೈಲುಕೋಣೆಯ ವ್ಯವಸ್ಥೆಯನ್ನು ಪರಿಶೀಲಿಸಿದ್ದರು. ಇದೀಗ ಸಿಬಿಐ ಕೇಂದ್ರ ಕಚೇರಿಯಲ್ಲಿರುವ ಗೆಸ್ಟ್ ಹೌಸ್ ನಂ.3 ಜೈಲುಕೋಣೆಯಲ್ಲಿ ಚಿದಂಬರಂ ರಾತ್ರಿ ಕಳೆದಿದ್ದಾರೆ ಎಂದು ವರದಿ ವಿವರಿಸಿದೆ.