ನವದೆಹಲಿ:ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಜತೆ ಮಾತುಕತೆ ನಡೆಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸಾಕ್ಷ್ಯವನ್ನು ನಾಶಪಡಿಸಿರುವುದಾಗಿ ಸಿಬಿಐ ಆರೋಪಿಸಿದೆ. ಐಎನ್ ಎಕ್ಸ್ ಮೀಡಿಯಾ ಕೇಸ್ ನಲ್ಲಿ ಆರೋಪಿಯಾಗಿದ್ದ ಇಂದ್ರಾಣಿ ಈಗ ಅಪ್ರೂವರ್(ಮಾಫಿ ಸಾಕ್ಷಿ) ಆಗಿ ಬದಲಾಗಿದ್ದಾರೆ.
ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಪಿ.ಚಿದಂಬರಂ ಅವರನ್ನು ಸಿಬಿಐ ತನಿಖೆ ನಡೆಸುತ್ತಿದೆ. ಇಂದ್ರಾಣಿ ಮುಖರ್ಜಿ ಒಡೆತನ ಹೊಂದಿದ್ದ ಐಎನ್ ಎಕ್ಸ್ ಮೀಡಿಯಾದಲ್ಲಿ ಲಾಭ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವ ಸ್ಥಾನ ಹೊಂದಿದ್ದ ಚಿದಂಬರಂ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಶುಕ್ರವಾರ ದೆಹಲಿ ಹೈಕೋರ್ಟ್ ನಲ್ಲಿ ಐಎನ್ ಎಕ್ಸ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪಿ.ಚಿದಂಬರಂ ಅವರು ಇಂದ್ರಾಣಿ ಮುಖರ್ಜಿಯನ್ನು ಭೇಟಿಯಾದ ದಿನದ ವಿಸಿಟರ್ಸ್ ಲಾಗ್ ಬುಕ್ ಪೇಜ್ ಮಿಸ್ಸಿಂಗ್ ಆಗಿದೆ ಎಂದು ಹೇಳಿದರು.
ತನಿಖೆಯ ವೇಳೆ ವಿಸಿಟರ್ಸ್ ರಿಜಿಸ್ಟರ್ ಅನ್ನು ನಾಶಪಡಿಸಿರುವುದು ಪತ್ತೆಯಾಗಿದೆ ಎಂದು ಮೆಹ್ತಾ ವಾದ ಮಂಡನೆ ವೇಳೆ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಇಂದ್ರಾಣಿ ಮುಖರ್ಜಿ ಜತೆಗೆ ಪಿ.ಚಿದಂಬರಂ ಭೇಟಿ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂಬ ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ವಾದಕ್ಕೆ ಮೆಹ್ತಾ ಪ್ರತಿವಾದ ಮಂಡಿಸುತ್ತ ತಿಳಿಸಿದ್ದರು.