Advertisement

ಪೆಟ್ರೋಲ್‌ ತಪ್ಪಿತು; ಗ್ಯಾಸ್‌ ಪೈಪ್‌ ಬಂತು!

12:44 AM Jan 13, 2020 | Team Udayavani |

ಬೆಂಗಳೂರು: ಹೊರವರ್ತುಲ ರಸ್ತೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿರುವ “ನಮ್ಮ ಮೆಟ್ರೋ’ ಮಾರ್ಗದಲ್ಲಿ ಸುಮಾರು ಒಂದು ಕಿ.ಮೀ.ಗಿಂತ ಹೆಚ್ಚು ಉದ್ದ ಅತ್ಯಧಿಕ ಒತ್ತಡದ ಅನಿಲ ಕೊಳವೆ ಮಾರ್ಗ ಹಾದು ಹೋಗಿದ್ದು, ಈ ಮೂಲಕ ಯೋಜನೆ ಮತ್ತೆ ಕಗ್ಗಂಟಾಗಿದೆ.

Advertisement

ಜಕ್ಕೂರು ಕ್ರಾಸ್‌ ಮತ್ತು ರಾಮಕೃಷ್ಣ ಹೆಗಡೆ ನಗರ ನಡುವೆ ಪೆಟ್ರೋಲ್‌ ಕೊಳವೆ ಹಾಗೂ ಎರಡು ಪ್ರಮುಖ ನೀರಿನ ಕೊಳವೆಗಳು ಹಾದುಹೋಗಿರುವ ಕಾರಣಕ್ಕಾಗಿ ಯೇ ವಿಮಾನ ನಿಲ್ದಾಣ ಮಾರ್ಗದ ವಿನ್ಯಾಸವನ್ನು ಬದಲಿಸಲಾಯಿಸಲಾಗಿತ್ತು. ಪರಿಷ್ಕೃತ ವಿನ್ಯಾಸದಲ್ಲಿ ಕೆ.ಆರ್‌. ಪುರದಿಂದ ಹೆಬ್ಬಾಳ ಮೂಲಕ ವಿಮಾನ ನಿಲ್ದಾಣದವರೆಗೆ ಮೆಟ್ರೋ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಅಲ್ಲಿಯೂ ಬೃಹತ್‌ ಅನಿಲ ಕೊಳವೆಮಾರ್ಗ ಹಾದುಹೋಗಿ ರುವುದು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ನಿದ್ದೆಗೆಡಿಸಿದೆ.

17 ಕಿ.ಮೀ. ಉದ್ದದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಮತ್ತು ಕೆ.ಆರ್‌. ಪುರ ನಡುವೆ ಬರುವ ಕಾಡು ಬೀಸನಹಳ್ಳಿ ಸಮೀಪ ಸುಮಾರು 600 ಮೀ. ಉದ್ದದ ಅನಿಲ ಕೊಳವೆ ಮಾರ್ಗ ಹಾದುಹೋಗಿದೆ. ಅದೇ ರೀತಿ, 29.12 ಕಿ.ಮೀ. ಉದ್ದದ ಕೆ.ಆರ್‌. ಪುರ- ಹೆಬ್ಬಾಳ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ಬರುವ ವೀರಣ್ಣನಪಾಳ್ಯ ಬಳಿ 500 ಮೀ. ಉದ್ದದ ಕೊಳವೆ ಮಾರ್ಗ ಹಾದುಹೋಗಿದೆ. ಇದಕ್ಕಾಗಿ ಮತ್ತೆ ಮೆಟ್ರೋ ಮಾರ್ಗ ವನ್ನು ಪರಿಷ್ಕರಿಸುವ ಬದಲಿಗೆ, ಕೊಳವೆ ಮಾರ್ಗವನ್ನೇ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ.

ಭೂಸ್ವಾಧೀನ; 200-250 ಕೋಟಿ ರೂ. ಹೊರೆ: ಮೆಟ್ರೋ ಮಾರ್ಗ ಬದಲಿಸುವುದರಿಂದ ಭೂಸ್ವಾಧೀ ನಕ್ಕೆ ಸುಮಾರು 200ರಿಂದ 250 ಕೋಟಿ ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಅಲ್ಲದೆ, ಸ್ವಾಧೀನ ಪ್ರಕ್ರಿಯೆಗೆ ಮತ್ತಷ್ಟು ಸಮಯ ವ್ಯಯವಾಗುತ್ತದೆ. ಪರಿಣಾಮ ಯೋಜನೆ ಇನ್ನಷ್ಟು ವಿಳಂಬವಾಗ ಬಹುದು. ಇದೆಲ್ಲ ವನ್ನೂ ಮನಗಂಡು ಅನಿಲ ಕೊಳವೆ ಮಾರ್ಗ ಸ್ಥಳಾಂತರ ವೇ ಸೂಕ್ತ ಎಂಬ ನಿರ್ಣಯಕ್ಕೆ ಬರಲಾಗಿದೆ. ಆದರೆ, ಅತ್ಯಧಿಕ ಒತ್ತಡದ ಅನಿಲ ಕೊಳವೆಯನ್ನು ಏಕಾಏಕಿ ಸ್ಥಳಾಂತರಿಸುವುದು ಸುಲಭದ ಮಾತಲ್ಲ. ಇದರಿಂದ ಸಾವಿರಾರು ಗ್ರಾಹಕರಿಗೆ ಸಮಸ್ಯೆಯಾಗಲಿದೆ ಎಂಬ ಅಪಸ್ವರ ಅನಿಲ ಪ್ರಾಧಿಕಾರ (ಗೇಲ್‌)ದಿಂದ ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ಏಕಾಏಕಿ ಕೊಳವೆ ಮಾರ್ಗವನ್ನು ಸ್ಥಳಾಂತರಿಸುವ ಬದಲು ಈ ಸಂಬಂಧ ಕನ್ಸಲ್ಟಂಟ್‌ ಸಂಸ್ಥೆ ನೇಮಿಸಲು ಪ್ರಾಧಿಕಾರವು ಉದ್ದೇಶಿಸಿದೆ. ಆ ಕನ್ಸಲ್ಟಂಟ್‌ ಸಂಸ್ಥೆ ನೀಡುವ ನಿರ್ಧಾರವನ್ನು ಆಧರಿಸಿ ಮುಂದುವರಿಯಲು “ಗೇಲ್‌’ ನಿರ್ಧರಿಸಿದೆ.  ರಾತ್ರೋರಾತ್ರಿ ಗ್ಯಾಸ್‌ ಪೈಪ್‌ಲೈನ್‌ ಸ್ಥಳಾಂತರಿಸಲಾಗುವುದಿಲ್ಲ. ಏಕೆಂದರೆ, ಉದ್ದೇಶಿತ ಮಾರ್ಗದಲ್ಲಿ 11 ಮಿ.ಮೀ. ದಪ್ಪನೆಯ ಪೈಪ್‌ಗಳಾಗಿವೆ. ಈ ಮಾದರಿಯ ಪೈಪ್‌ಗಳು ಮಾರುಕಟ್ಟೆಯಲ್ಲಿ ಒಮ್ಮೆಲೆ ಲಭ್ಯವಿರುವು ದಿಲ್ಲ.

Advertisement

ಮುಂಚಿತವಾಗಿ ಬೇಡಿಕೆ ಸಲ್ಲಿಸಿ ತಯಾರಿಸಬೇಕು. ಹೆಚ್ಚೆಂದರೆ ಒಂದೆರಡು ಪೈಪ್‌ಗಳಿರುತ್ತವೆ. ತಲಾ ಒಂದು ಕೊಳವೆ ಉದ್ದ 50 ಮೀ.ನಷ್ಟಿರುತ್ತದೆ. ಈಗ ಬೇಕಾಗಿರು ವುದು 1 ಕಿ.ಮಿ.ಗಿಂತ ಹೆಚ್ಚು ಉದ್ದದ ಪೈಪ್‌. ಕನ್ಸಲ್ಟೆಂಟ್‌ ಸಂಸ್ಥೆ ಒಂದೊಮ್ಮೆ ಸ್ಥಳಾಂತರಿಸಬಹುದು ಎಂದರೂ ಇದಕ್ಕಾಗಿ ಟೆಂಡರ್‌ ಕರೆಯಬೇಕಾಗುತ್ತದೆ. ಗುತ್ತಿಗೆ ಪಡೆದ ಕಂಪನಿ ಈ ಪೈಪ್‌ಗ್ಳನ್ನು ತಯಾರಿಸಿ ಪೂರೈಸ ಬೇಕಾಗುತ್ತದೆ. ಇದಕ್ಕೆಲ್ಲಾ ಸಮಯ ಹಿಡಿಯುತ್ತದೆ. ಇನ್ನು ಉಳಿದ ಮಾರ್ಗಗಳಿಗೆ ಹೋಲಿಸಿದರೆ ಸುಮಾರು ನಾಲ್ಕೈದು ಪಟ್ಟು ಒತ್ತಡದಲ್ಲಿ ಅನಿಲ ಪೂರೈಕೆ ಆಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ “ಗೇಲ್‌’ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಪೂರೈಕೆ ವ್ಯತ್ಯಯ ಸಾಧ್ಯತೆ: ಈಮಾರ್ಗದಿಂದ ಸುತ್ತಲಿನ 10ರಿಂದ 15 ಸಾವಿರ ಗ್ರಾಹಕರಿಗೆ ಅನಿಲ ಪೂರೈಕೆ ಆಗುತ್ತಿದೆ. ಇದರಲ್ಲಿ ದೊಡ್ಡ ಕಂಪೆನಿಗಳು ಕೂಡ ಸೇರಿವೆ. ಸ್ಥಳಾಂತರಕ್ಕೆ ಕನಿಷ್ಠ 15 ದಿನಗಳು ಬೇಕಾಗಲಿದ್ದು, ಗ್ರಾಹಕರಿಗೆಲ್ಲಾ ವ್ಯತ್ಯಯ ಆಗಲಿದೆ.

ಯೋಜನೆ ಅನುಷ್ಠಾನ ವಿಳಂಬ ಆಗದು: ಮಾರ್ಗ ಬದಲಾವಣೆಗಿಂತ ಗ್ಯಾಸ್‌ ಪೈಪ್‌ಲೈನ್‌ಗಳ ಸ್ಥಳಾಂತರ ಸೂಕ್ತ. ಇದನ್ನು “ಗೇಲ್‌’ ಗಮನಕ್ಕೂ ತರಲಾಗಿದೆ. ಇದರಿಂದ ಯೋಜನೆ ಅನುಷ್ಠಾನದಲ್ಲಿ ಯಾವುದೇ ವಿಳಂಬ ಆಗದು. ಏಕೆಂದರೆ, ಮುಂದೆ ಕಂಪೆನಿಗಳಿಗೆ ಟೆಂಡರ್‌ ನೀಡಿದ ನಂತರ ಸಮಸ್ಯೆ ಆಗಬಹುದು ಎಂಬ ಮುಂದಾಲೋಚನೆಯಿಂದಲೇ ಈ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ, ಇದರಿಂದ ಯೋಜನೆ ವಿಳಂಬವಾಗದು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ತಿಳಿಸಿದ್ದಾರೆ.

ಗ್ಯಾಸ್‌ ಪೈಪ್‌ಲೈನ್‌ ಸ್ಥಳಾಂತರ?: ಗೇಲ್‌ ಅನಿಲ ಕೊಳವೆ ಮಾರ್ಗ ನಿರ್ಮಾಣಕ್ಕೆ 2008-09ರಲ್ಲಿ ಶಿಲಾನ್ಯಾಸ ನೆರವೇರಿಸಿತ್ತು. ಆ ಸಂದರ್ಭದಲ್ಲಿ ಪೈಪ್‌ಲೈನ್‌ಗಳು ರಸ್ತೆ ಬದಿಯಲ್ಲಿ ಹಾದುಹೋಗಿದ್ದವು. ಆದರೆ, ನಂತರದ ದಿನಗಳಲ್ಲಿ ಹೊರವರ್ತುಲ ರಸ್ತೆಯ ಗಾತ್ರವನ್ನು ಹಿಗ್ಗಿಸಲಾಯಿತು. ಪರಿಣಾಮ ಈ ಗ್ಯಾಸ್‌ ಪೈಪ್‌ಲೈನ್‌ಗಳು ಸಹಜವಾಗಿ ಮಾರ್ಗ ಮಧ್ಯದಲ್ಲಿವೆ. ಮೆಟ್ರೋ ಮಾರ್ಗ ಈಗ ಅದೇ ಹಾದಿಯಲ್ಲಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳಾಂತರಕ್ಕೆ ಉದ್ದೇಶಿಸಲಾಗಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next