Advertisement

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸ್ವಾವಲಂಬನೆಯತ್ತ ದ.ಕ. ಜಿಲ್ಲೆ ದಿಟ್ಟ ಹೆಜ್ಜೆ

08:02 PM Sep 19, 2021 | Team Udayavani |

ಮಹಾನಗರ: ಕೊರೊನಾ ಎರಡನೇ ಅಲೆಯ ವೇಳೆ ದ.ಕ. ಜಿಲ್ಲೆಯಲ್ಲಿ ಎದುರಾಗಿದ್ದ ಆಕ್ಸಿಜನ್‌ ಅಭಾವದ ಅನುಭವದಿಂದ ಪಾಠ ಕಲಿತಿರುವ ಆರೋಗ್ಯ ಇಲಾಖೆ ಇದೀಗ ಆಕ್ಸಿಜನ್‌ ವಿಷಯದಲ್ಲಿ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಟ್ಟಿದೆ.

Advertisement

ಮುಂಬರುವ ದಿನದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಆಕ್ಸಿಜನ್‌ ಕೊರತೆ ಆಗಬಾರದು ಎಂಬ   ನಿಟ್ಟಿನಲ್ಲಿ ಮಂಗಳೂರಿನ ವೆನ್ಲಾಕ್‌, ಲೇಡಿಗೋಶನ್‌ ಸಹಿತ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನ ಘಟಕಗಳನ್ನು ವಿವಿಧ ಕಂಪೆನಿಗಳ ಪ್ರಾಯೋಜಕತ್ವದೊಂದಿಗೆ ತೆರೆಯಲು ನಿರ್ಧರಿಸಲಾಗಿತ್ತು.

ಒಟ್ಟು 16 ಆಮ್ಲಜನಕ ಸ್ಥಾವರ ಯೋಜನೆ (ಒಟ್ಟು 5844 ಎಲ್‌ಪಿಎಂ ಸಾಮರ್ಥ್ಯ) ಜಾರಿಗೆ ಉದ್ದೇಶಿಸಲಾಗಿತ್ತು. ಈ ಪೈಕಿ 6 ಕಾರ್ಯಾರಂಭಿಸಿವೆ. 2 ಪ್ರಾಯೋಗಿಕವಾಗಿ ಕಾರ್ಯ ಆರಂಭಿಸಿದ್ದು, 5ರ ಅಳವಡಿಕೆ ನಡೆಯುತ್ತಿದೆ. ಉಳಿದ ಮೂರು ಸ್ಥಾವರ ಅಳವಡಿಕೆ ಇನ್ನಷ್ಟೇ ಆಗಬೇಕಿದೆ.

ವೆಕ್‌ ಆಸ್ಪತ್ರೆಯಲ್ಲಿ ಮೂರು ಯುನಿಟ್‌:

ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೂರು ಯುನಿಟ್‌ಗಳನ್ನು ಅಳವಡಿಸಲಾಗಿದೆ. ಇದರಲ್ಲಿ 1000 ಎಲ್‌ಪಿಎಂ ಸ್ಥಾವರವನ್ನು ಪಿಎಂ ಕೇರ್ಸ್‌ ಫಂಡ್‌, 930 ಎಲ್‌ಪಿಎಂ ಸ್ಥಾವರವನ್ನು    ಎಂಆರ್‌ಪಿಎಲ್‌ನಿಂದ ಹಾಗೂ ರಾಜ್ಯ ಸರಕಾರದಿಂದ 500 ಎಲ್‌ಪಿಎಂನ ಸ್ಥಾವರ ಅಳವಡಿಸಲಾಗಿದೆ. ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಕ್ರೆಡೈ ಸಂಸ್ಥೆ ವತಿಯಿಂದ 500 ಎಲ್‌ಪಿಎಂ ಸಾಮರ್ಥಯದಲ್ಲಿ ಆಕ್ಸಿಜನ್‌ ಸ್ಥಾವರ ನಿರ್ಮಿಸಲಾಗುತ್ತಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 390 ಎಲ್‌ಪಿಎಂ(ರಾಜ್ಯ ಸರಕಾರ), ಬಂಟ್ವಾಳ ಆಸ್ಪತ್ರೆಯಲ್ಲಿ 500 ಎಲ್‌ಪಿಎಂ(ಕ್ರೆಡೈ) ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ 450 ಎಲ್‌ಪಿಎಂ(ಕ್ಯಾಂಪ್ಕೋ), ಸುಳ್ಯದಲ್ಲಿ 250 ಎಲ್‌ಪಿಎಂ(ಕೆಐಒಸಿಎಲ್), ಉಳ್ಳಾಲ ಸಮುದಾಯ ಆಸ್ಪತ್ರೆಯಲ್ಲಿ 500 ಎಲ್‌ಪಿಎಂ (ಸೋನು ಸೂದ್‌), ಮೂಡುಬಿದಿರೆ ಸಮುದಾಯ ಆಸ್ಪತ್ರೆಯಲ್ಲಿ 250 ಎಲ್‌ಪಿಎಂ(ಕೆಐಒಸಿಎಲ್‌) ನಿರ್ಮಿಸಲಾಗಿದೆ.

Advertisement

ಕಡಬ ಸಮುದಾಯ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ, ವಿಟ್ಲ ಸಮುದಾಯ ಆಸ್ಪತ್ರೆ, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗಳಲ್ಲಿ ತಲಾ 81 ಎಲ್‌ಪಿಎಂ ಸಾಮರ್ಥ್ಯದ ಘಟಕಗಳನ್ನು ಎಸ್‌ಬಿಐ, ಎಂಸಿಎಫ್, ಕೆನರಾ ಬ್ಯಾಂಕ್‌ ನಿರ್ಮಿಸಿಕೊಟ್ಟಿವೆ.   ಮೂಲ್ಕಿ ಸಮುದಾಯ ಆಸ್ಪತ್ರೆಯಲ್ಲಿ 200 ಎಲ್‌ಪಿಎಂ ಹಾಗೂ ವಾಮದಪದವು ಸಮುದಾಯ ಆಸ್ಪತ್ರೆಯಲ್ಲಿ 50 ಎಲ್‌ಪಿಎಂ ಘಟಕಗಳು ನಿರ್ಮಾಣವಾಗುತ್ತಿದೆ.

ಆಕ್ಸಿಜನ್‌ ಬೇಡಿಕೆ;  30 ಕಿ.ಲೀ.ನಿಂದ 13 ಕಿ.ಲೀ.ಗೆ ಇಳಿಕೆ :

ಪ್ರಸಕ್ತ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಹೀಗಾಗಿ ದೈನಂದಿನ ಆಕ್ಸಿಜನ್‌ ಬೇಡಿಕೆ ಪ್ರಮಾಣ ಕೂಡ (ಕೊರೊನಾ ಉಲ್ಬಣವಿದ್ದ ಕಾಲ) 28-30 ಕಿಲೋ ಲೀಟರ್‌ನಿಂದ ಸದ್ಯ 12-13 ಕಿ.ಲೀಗೆ ಇಳಿದಿದೆ. ಲಿಕ್ವಿಡ್‌ ಆಕ್ಸಿಜನ್‌ ಅನ್ನು ಬಳ್ಳಾರಿ, ಕೇರಳದಿಂದ ತಂದು ರೀಪಿಲ್ಲಿಂಗ್‌ ಮಾಡುವ ಒಂದು ಘಟಕ ಹಾಗೂ “ನ್ಯಾಚುರಲ್‌ ಏರ್‌’ ಅನ್ನು ಕಂಪ್ರಸ್‌ ಮಾಡಿ ಪ್ರತ್ಯೇಕಿಸಿ ಆಕ್ಸಿಜನ್‌ ತಯಾರಿಸುವ, ರೀಫಿಲ್ಲಿಂಗ್‌ ಮಾಡುವ ಎರಡು ಉತ್ಪಾದನ ಘಟಕಗಳು ದ.ಕ. ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿವೆ. ದ.ಕ./ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಆಸ್ಪತ್ರೆಗಳಿಗೆ ಇಲ್ಲಿಂದಲೇ ಆಕ್ಸಿಜನ್‌ ಸರಬರಾಜು ಮಾಡಲಾಗುತ್ತಿತ್ತು. ಜತೆಗೆ ಖಾಸಗಿ ಆಸ್ಪತ್ರೆಗೆ ಬಳ್ಳಾರಿಯಿಂದ ಆಕ್ಸಿಜನ್‌ ತರಿಸಲಾಗುತ್ತಿದೆ.

ದ.ಕ. ಜಿಲ್ಲೆಯಲ್ಲಿ ಕೊರೊನಾ ಆತಂಕ ಮತ್ತೆ ಎದುರಾದರೂ ಆಕ್ಸಿಜನ್‌ ಸಮಸ್ಯೆ ಈ ಬಾರಿ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ವಿವಿಧ ಕಂಪೆನಿಗಳ ನೆರವಿನಿಂದ ಜಿಲ್ಲಾ/ತಾಲೂಕು ಆಸ್ಪತ್ರೆ ಗಳಲ್ಲಿ ಆಕ್ಸಿಜನ್‌ ಘಟಕ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಬಹು ತೇಕ ಪೂರ್ಣವಾಗಿದೆ. ಉಳಿದ ಘಟಕ ಶೀಘ್ರ ಪೂರ್ಣವಾಗಲಿದೆ. ಡಾ| ಕಿಶೋರ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next