ಬೀದರ್: ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳ ಸಮಯಪ್ರಜ್ಞೆ, ಪರಿಶ್ರಮದ ಪರಿಣಾಮ ಸೋಮವಾರ ನಗರದ ಬ್ರಿಮ್ಸ್ (ಕೋವಿಡ್) ಆಸ್ಪತ್ರೆಯಲ್ಲಿ ಚಾಮರಾಜನಗರ ಜಿಲ್ಲೆ ಮಾದರಿಯಲ್ಲಿ ಸಂಭವಿಸುತ್ತಿದ್ದ ಭಾರೀ ಅನಾಹುತ ತಪ್ಪಿದೆ. ಸಕಾಲಕ್ಕೆ ಆಮ್ಲಜನಕ ಪೂರೈಕೆಗೆ ದಿಟ್ಟ ಕ್ರಮ ವಹಿಸುವ ಮೂಲಕ 100ಕ್ಕೂ ಹೆಚ್ಚು ಸೋಂಕಿತರ ಅಮೂಲ್ಯ ಜೀವ ಉಳಿಸಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಗೆ ಬೆಳಿಗ್ಗೆ 8 ಗಂಟೆಗೆ ಬಳ್ಳಾರಿಯ ಜಿಂದಾಲ್‌ನಿಂದ ಆಗಮಿಸಬೇಕಿದ್ದ ಆಕ್ಸಿಜನ್ ಹೊತ್ತ ಟ್ಯಾಂಕರ್ ತಾಂತ್ರಿಕ ಕಾರಣಗಳಿಂದ ತಡವಾಗಿರುವುದು ಬ್ರಿಮ್ಸ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಆತಂಕ ತಂದೊಡ್ಡಿದ್ದು, ಇದು ಬೀದರ್ ಜನರನ್ನು ಬೆಚ್ಚಿ ಬಿಳಿಸುವಂತೆ ಮಾಡಿತ್ತು. ಆದರೆ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ನೇತೃತ್ವದ ಅಧಿಕಾರಿ ಮತ್ತು ವೈದ್ಯರ ತಂಡದ ಮುನ್ನೆಚ್ಚರಿಕೆ ನಡೆಯಿಂದ ದೊಡ್ಡ ದುರಂತ ಆಗುವುದು ತಪ್ಪಿದಂತಾಗಿದೆ.
ಸುಮಾರು 550 ಕೋವಿಡ್ ಹಾಸಿಗೆ ಆಸ್ಪತ್ರೆಯಲ್ಲಿ 490 ಆಕ್ಸಿಜನ್ ಮತ್ತು 82 ವೆಂಟಿಲೇಟರ್ ವ್ಯವಸ್ಥೆ ಹೊಂದಿರುವ ಬೆಡ್‌ಗಳಿದ್ದು, ಆಸ್ಪತ್ರೆ ಆವರಣದಲ್ಲಿ 12 ಕೆ.ಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ವ್ಯವಸ್ಥೆ ಇದೆ. ಸದ್ಯ 200ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 100ಕ್ಕೂ ಹೆಚ್ಚು ಜನ ಆಕ್ಸಿಜನ್ ವೆಂಟಿಲೇಟರ್ ಆಧಾರದಲ್ಲಿ ಉಸಿರಾಡುತ್ತಿದ್ದಾರೆ. ಇಂದು ಬೆಳಿಗ್ಗೆ ಎರಡ್ಮೂರು ಗಂಟೆ ಸಾಕಾಗುವಷ್ಟೇ ಮಾತ್ರ ಆಮ್ಲಜನಕ ಲಭ್ಯತೆ ಇತ್ತು. ಆದರೆ, ಸಿಂದಗಿ ಬಳಿ ಬ್ರೇಕ್ ಫೇಲ್‌ದಿಂದಾಗಿ ಆಮ್ಲಜನಕದ ಟ್ಯಾಂಕರ್ ಬಾರದಿರುವುದು ಆಕ್ಸಿಜನ ಕೊರತೆಗೆ ಕಾರಣವಾಗಿತ್ತು. ಇದರಿಂದ ಅಧಿಕಾರಿ ವರ್ಗದವರಲ್ಲಿ ತಳಮಳ ಹೆಚ್ಚಿಸಿತ್ತು.
ಇದನ್ನೂ ಓದಿ:ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು
ಆಕ್ಸಿಜನ್ ವಾಹನ ತಡವಾದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಬ್ರಿಮ್ಸ್‌ನತ್ತ ದೌಡಾಯಿಸಿತು. ಕೂಡಲೇ ಎಚ್ಚೆತ್ತ ಬ್ರಿಮ್ಸ್ ಹಿರಿಯ ವೈದ್ಯ ಅಧಿಕಾರಿಗಳ ನಾಲ್ಕು ತಂಡಗಳನ್ನಾಗಿ ಮಾಡಿ ತ್ವರಿತ ಕಾರ್ಯಾಚರಣೆ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಆಕ್ಸಿಜನ ಕೊರತೆ ಆಗದಂತೆ ಅಕ್ಕ ಪಕ್ಕದ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಸಿಲಿಂಡರ್‌ಗಳ ವ್ಯವಸ್ಥೆ ಮಾಡಿ, ಬ್ರಿಮ್ಸ್‌ನ ಎರಡು ಪ್ರತ್ಯೇಕ ಕಟ್ಟಡಗಳಲ್ಲಿರುವ ಕೋವಿಡ್ ರೋಗಿಗಳಿಗೆ ಉಸಿರಾಡಲು ಪ್ರಾಣವಾಯು ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ.
ನಂತರ ಕಲ್ಬುರ್ಗಿ ಜಿಲ್ಲಾಡಳಿತವನ್ನು ಸಂಪರ್ಕಿಸಿ ಅಲ್ಲಿಗೆ ತೆರಳಬೇಕಿದ್ದ ಆಕ್ಸಿಜನ್ ವಾಹನವನ್ನು ತುರ್ತಾಗಿ ಬೀದರ್ ಗೆ ನೇರವಾಗಿ ಕಳುಹಿಸುವಂತೆ ಸ್ಥಳೀಯ ಜಿಲ್ಲಾಡಳಿತ ಮನವಿ ಮಾಡಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಕ್ಸಿಜನ್ ಟ್ಯಾಂಕ್ ಬಂದು ತಲುಪಿದ್ದು, ಅಧಿಕಾರಿ ಮತ್ತು ವೈದ್ಯರು ನಿಟ್ಟಿಸಿರು ಬಿಟ್ಟಿದ್ದಾರೆ.
ಕಳೆದೆರಡು ವಾರಗಳಿಂದ ಬ್ರಿಮ್ಸ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಸೋಮವಾರ ಆಮ್ಲಜನಕದ ಟ್ಯಾಂಕರ್ ಬರಲು ತಡವಾದ್ದರಿಂದ ಬ್ರಿಮ್ಸ್‌ನಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಜಿಲ್ಲಾಡಳಿತ, ಬ್ರಿಮ್ಸ್ ವೈದ್ಯಾಧಿಕಾರಿಗಳ ತಂಡದ ಸತತ ಪ್ರಯತ್ನದಿಂದ ರೋಗಿಗಳ ಜೀವ ಉಳಿದಂತಾಗಿದೆ. ನೆರೆ ಜಿಲ್ಲೆಗಳಿಂದ ತ್ವರಿತವಾಗಿ ಸಿಲೆಂಡರ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಕಲ್ಬುರ್ಗಿಯಿಂದ ಆಕ್ಸಿಜನ್ ಟ್ಯಾಂಕರ್ ಬಂದಿದೆ.
ಡಾ. ಶಿವಕುಮಾರ, ನಿರ್ದೇಶಕರು, ಬ್ರಿಮ್ಸ್.