Advertisement

ಮುಂಬಯಿಗೆ ದೊರೆಯಬೇಕಾದ ಆಮ್ಲಜನಕ ಥಾಣೆ, ನವಿಮುಂಬಯಿ ಮನಪಾ ಪಾಲಿಗೆ

01:32 PM May 03, 2021 | Team Udayavani |

ಮುಂಬಯಿ: ದೇಶದಲ್ಲಿ ಆಮ್ಲಜನಕ ಕೊರತೆಯಿರುವ ಕಾರಣ ರಾಜ್ಯಗಳು ಹೆಚ್ಚಿನ ಆಮ್ಲಜನಕ ಪಡೆಯಲು ಹೆಣಗಾಡುತ್ತಿರುವಾಗ ಮುಂಬಯಿ ನಗರಕ್ಕೆ ವಿತರಣೆಯಾಗಬೇಕಾಗಿದ್ದ ಆಮ್ಲಜನಕವನ್ನು ಥಾಣೆ ಮತ್ತು ನವಿ ಮುಂಬಯಿ ಮನಪಾಗಳು ಸರಬರಾಜುದಾರರಿಂದ ತಮ್ಮ ಕಡೆಗೆ ತಿರುಗಿಸಿಕೊಂಡಿವೆ ಎಂಬ ಆರೋಪವಿದೆ.

Advertisement

ಇದರ ಪರಿಣಾಮವಾಗಿ ಮುಂಬಯಿಗೆ ದೊರೆಯ ಬೇಕಾದ 114 ಮೆಟ್ರಿಕ್‌ ಟನ್‌ ಆಮ್ಲಜನಕವು ನಗರಕ್ಕೆ ತಲುಪದ ಕಾರಣ ಕಳೆದ ವಾರ ಮುಂಬಯಿಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಯಿತು. ಈ ನಿಟ್ಟಿನಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಆಮ್ಲಜನಕ ಸರಬರಾಜುದಾರರಿಗೆ ನೋಟಿಸ್‌ ನೀಡಿದ್ದು, ಆಹಾರ ಮತ್ತು ಔಷಧ ಆಡಳಿತ ಆಯುಕ್ತರು ಹಾಗೂ ಕೊಂಕಣ ವಿಭಾಗೀಯ ಆಯುಕ್ತರಲ್ಲಿ ದೂರು ಸಲ್ಲಿಸಿದೆ.
ಪ್ರತೀ ನಗರಕ್ಕೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಆಮ್ಲಜನಕ ಪಾಲನ್ನು ನಿರ್ಧರಿಸಲಾಗುತ್ತದೆ.

ಅದರಂತೆ ಮುಂಬಯಿಗೆ 234 ಮೆಟ್ರಿಕ್‌ ಟನ್‌ ಆಮ್ಲಜ ನಕವನ್ನು ಒದಗಿಸಲಾಗುತ್ತದೆ. ಗುಜರಾತ್‌, ಅಲಿಬಾಗ್‌ ಮತ್ತು ಇತರ 3 ಪ್ರದೇಶಗಳ ಉತ್ಪಾದಕ ಕಂಪೆನಿಗಳ ವತಿಯಿಂದ ಲಭ್ಯವಾಗುವ ಆಮ್ಲಜನಕವನ್ನು ಸತರಾಮ ದಾಸ್‌ ಗ್ಯಾಸ್‌ ಕಂಪೆನಿ ಮೂಲಕ ಮುಂಬಯಿಗೆ ಸರಬರಾಜು ಮಾಡಲಾಗುತ್ತದೆ. ಪಾಲಿಕೆಯು ಈ ಸಂಗ್ರಹವನ್ನು ನಗರದ ಆಸ್ಪತ್ರೆಗಳು ಮತ್ತು ಜಂಬೋ ಕೋವಿಡ್‌ ಕೇಂದ್ರಗಳಿಗೆ ಹಂಚಲಾಗುತ್ತದೆ.

ಕಂಪೆನಿಯು ಮುಂಬಯಿ ಜತೆಗೆ ಥಾಣೆ ಮತ್ತು ನವಿಮುಂಬಯಿ ಮನಪಾಗಳಿಗೂ ಆಮ್ಲಜನಕವನ್ನು ಪೂರೈಸುತ್ತದೆ. ಆಮ್ಲಜನಕ ವಿತರಣೆ ಬಗ್ಗೆ ನವಿ ಮುಂಬಯಿ ಮತ್ತು ಥಾಣೆ ಮನಪಾಗಳಿಂದ ಮಾಹಿತಿ ಪಡೆದ ಬಳಿಕ ಮುಂಬಯಿ ಮನಪಾ ಅಧಿಕಾರಿಗಳು ಕಂಪೆನಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅನಂತರ ಆಹಾರ ಮತ್ತು ಔಷಧ ಆಡಳಿತ ಆಯುಕ್ತರಿಗೆ ಹಾಗೂ ಕೊಂಕಣ ವಿಭಾಗೀಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಮುಂಬಯಿಗೆ ಸಂಪೂರ್ಣ ಆಮ್ಲಜನಕ ಖಚಿತಪಡಿಸಿಕೊಳ್ಳಲು ಸತರಾಮದಾಸ್‌ ಗ್ಯಾಸ್‌ ಕಂಪೆನಿಯ ಆವರಣದಲ್ಲಿ ತಹಶೀಲ್ದಾರ್‌ ತಂಡವನ್ನು ನೇಮಿಸಬೇಕೆಂದು ಬಿಎಂಸಿ ವಿನಂತಿಸಿದೆ.

ಮನಪಾಗಳ ಹೇಳಿಕೆ ಏನು ?
ಆಮ್ಲಜನಕ ಟ್ಯಾಂಕರ್‌ ಸರಬರಾಜುದಾರ ಕಂಪೆನಿಯಿಂದ ನಮಗೆ ಬಂದಿತ್ತು ಎಂದು ನವಿಮುಂಬಯಿ ಮತ್ತು ಥಾಣೆ ಮನಪಾಗಳು ಉತ್ಪಾದಕ ಕಂಪೆನಿಗಳು ಕಳುಹಿಸಿದ ದಾಖಲೆಗಳನ್ನು ಉಲ್ಲೇಖೀಸಿವೆ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಆಮ್ಲಜನಕವನ್ನು ನಾವು ಪಡೆದಿದ್ದು, ಉಳಿದ ಆಮ್ಲಜನಕವನ್ನು ಮುಂಬಯಿ ಮಹಾನಗರ ಪಾಲಿಕೆಗೆ ಕಳುಹಿಸಲಾಯಿತು. ಟ್ಯಾಂಕರ್‌ ಮುಂಬಯಿಗೆ ಬಂದಿರುವುದು ತಿಳಿದುಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮುದ್ರಣದ ದೋಷದಿಂದಾಗಿ ಆಮ್ಲಜನಕವು ನವಿಮುಂಬಯಿ ಹಾಗೂ ಥಾಣೆ ಮನಪಾಕ್ಕೆ ಆಮ್ಲಜನಕ ಪೂರೈಕೆಯಾಗಿರುವುದು ತಿಳಿದುಬಂದಿದೆ. ಈ ಗೊಂದಲದಿಂದ ಘಟನೆ ಸಂಭವಿಸಿದ್ದು, ಇದರ ಹೊರತಾಗಿ ನಾವು ಮುಂಬಯಿಗೆ ಪೂರೈಕೆಯಾಗುವ ಆಮ್ಲಜನಕವನ್ನು ಬಳಸುವುದಿಲ್ಲ ಎಂದು ನವಿ ಮುಂಬಯಿ ಮನಪಾ ಆಯುಕ್ತ ಅಭಿಜಿತ್‌ ಬಂಗಾರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next