ರಾಯಚೂರು: ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ಇರುವುದು ಸುಳ್ಳು ಎಂಬುದನ್ನು ನಗರ ಶಾಸಕರು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ವೇಳೆ ಗುರುವಾರ ನಗರದಲ್ಲಿ ಆಕ್ಸಿಜನ್ ಕೊರತೆ ಇರುವುದು ಸಾಬೀತಾದಲ್ಲಿ ಶಾಸಕರು ರಾಜೀನಾಮೆ ನೀಡುವರೇ ಎಂದು ಸವಾಲೆಸೆದರು.
ನಗರದಲ್ಲಿ ಬಹುತೇಕ ಕಡೆ ಆಕ್ಸಿಜನ್ ಕೊರತೆ ಕಂಡು ಬರುತ್ತಿದ್ದು, ಜನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಆದರೆ, ಪರಿಸ್ಥಿತಿ ನಿಭಾಯಿಸುವ ಬದಲು ನಗರದಲ್ಲಿ ಬೇಡಿಕೆ ತಕ್ಕಷ್ಟು ಆಕ್ಸಿಜನ್ ಲಭ್ಯವಿದೆ. ಯಾವುದೇ ಕೊರತೆ ಇಲ್ಲ ಎಂದು ಶಾಸಕ ಡಾ| ಶಿವರಾಜ ಪಾಟೀಲ್ ಮತ್ತು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಸುಳ್ಳು ಹೇಳಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜನರ ಜೀವನದ ಜತೆ ಚಲ್ಲಾಟ ಆಡುತ್ತಿದ್ದಾರೆ. ಇದರಿಂದ ಮುಂದೆ ಏನಾದರೂ ಅನಾಹುತಗಳಾದರೆ ಅವರೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಿಮ್ಸ್ ಮತ್ತು ಓಪೆಕ್‌ನಲ್ಲಿ ನಿತ್ಯ 5ರಿಂದ 15 ಜನ ಸಾಯುತ್ತಾರೆ. ಕೊರೊನಾ ಸೋಂಕಿತರಿಗೆ ಬೇಡಿಕೆಯಷ್ಟು ಆಕ್ಸಿಜನ್ ಪಡೆಯುವಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕದೆ ಸಮರ್ಥನೆ ನೀಡುವುದು ಸರಿಯಲ್ಲ. ಡಿಸಿ ಮತ್ತು ಶಾಸಕರಿಗೆ ಸಮಸ್ಯೆಯ ಮಾಹಿತಿ ಇಲ್ಲ. ಎಷ್ಟು ಆಕ್ಸಿಜನ್ ಸಂಗ್ರಹವಿದೆ ಎನ್ನುವ ಗೊಂದಲವಿದೆ.
ಶಾಸಕ ಡಾ| ಶಿವರಾಜ ಪಾಟೀಲ್ 30 ಕೆಎಲ್ ಆಕ್ಸಿಜನ್ ಲಭ್ಯವಿದೆ ಎಂದರೆ, ಡಿಸಿ 20 ಕೆಎಲ್ ಇದೆ ಎನ್ನುತ್ತಾರೆ. ಇದರಲ್ಲಿ ಯಾವುದು ನಿಖರ ಮಾಹಿತಿ ಎಂಬುದೆ ತಿಳಿಯುತ್ತಿಲ್ಲ ಎಂದರು. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸರ್ಕಾರಕ್ಕೆ ಸಂದೇಶ ನೀಡುವ ಉದ್ದೇಶದಿಂದ ಕೋವಿಡ್ ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಬೇಕಾಯಿತು.
ನವೋದಯ ವೈದ್ಯಕೀಯ ಕಾಲೇಜಿನಲ್ಲಿ 80 ಸೋಂಕಿತರ ಚಿಕಿತ್ಸೆಗೆ 210 ಆಕ್ಸಿಜನ್ ಸಿಲಿಂಡರ್ ಬೇಕಿದೆ ಎಂದು ಅಧಿಕಾರಿಗಳು ದೃಢಪಡಿಸುತ್ತಾರೆ. ನಿನ್ನೆ ಮುಂಜಾನೆವರೆಗೂ ಯಾವುದೇ ಸಿಲಿಂಡರ್ ನೀಡಿರಲಿಲ್ಲ. ನಮ್ಮ ಪ್ರತಿಭಟನೆ ನಂತರ 100 ಸಿಲಿಂಡರ್ ನೀಡಿದ್ದಾರೆ. ಈ ವಿಚಾರ ಸರ್ಕಾರದ ಪ್ರತಿನಿಧಿ ಗಳಿಗೆ ತಿಳಿಯಬೇಕಿದೆ ಎಂದರು. ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ನಗರಸಭೆ ಸದಸ್ಯ ಜಯಣ್ಣ, ಕೆ.ಶಾಂತಪ್ಪ, ನಗರಸಭೆ ಸದಸ್ಯರಾದ ಜಿಂದಪ್ಪ, ಸಾಜೀದ್ ಸಮೀರ್, ನರಸಿಂಹಲು ಮಾಡಗಿರಿ ಸೇರಿ ಅನೇಕರಿದ್ದರು.