Advertisement
ಸೋಮವಾರ ಮತ್ತು ಮಂಗಳವಾರ ಎರಡು ದಿನಗಳಿಗೆ ಸೀಮಿತವಾದಂತೆ ರಾಜ್ಯಕ್ಕೆ ಸಿಗಬೇಕಿದ್ದ ಒಟ್ಟು ಆಕ್ಸಿಜನ್ ಪ್ರಮಾಣದಲ್ಲಿ ೨೮೬.೬೪ ಮೆಟ್ರಿಕ್ ಟನ್‌ನಷ್ಟು ಕೊರತೆ ಎದುರಾಗಿತ್ತು. ಉತ್ಪಾದನಾ ಘಟಕಗಳಲ್ಲಿ ತಲೆದೂರಿದ್ದ ತಾಂತ್ರಿಕ ದೋಷಗಳಿಂದ ಈ ಸಮಸ್ಯೆ ಉಂಟಾಗಿತ್ತು. ಆದರೆ ಸಮಯೋಚಿತ ಕ್ರಮಗಳಿಂದ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Related Articles
ಬಳ್ಳಾರಿಯ ಉತ್ಪಾದನಾ ಘಟಕಗಳಲ್ಲಿ ತಲೆದೂರಿದ್ದ ತಾಂತ್ರಿಕ ದೋಷ ಎರಡು ದಿನ ಮಾತ್ರ ಎಂದು ಆಡಳಿತ ಮಂಡಳಿಗಳು ತಿಳಿಸಿವೆ. ಮಂಗಳವಾರ ಸಂಜೆ ವೇಳೆಗೆ ಪರಿಸ್ಥಿತಿ ಸುಧಾರಣೆ ಆಗುವ ನಿರೀಕ್ಷೆಯಿದೆ. ಹೀಗಾಗಿ ಬುಧವಾರದಿಂದ ಆಕ್ಸಿಜನ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ಮಧ್ಯೆ ರಾಜ್ಯಕ್ಕೆ ನಿಗದಿಪಡಿಸಿದ್ದ ೧೦೧೫ ಮೆಟ್ರಿಕ್ ಟನ್ ಆಕ್ಸಿಜನ್ ಪ್ರಮಾಣವನ್ನು ಕೇಂದ್ರವು 1200 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳು ಕೇಂದ್ರದ ಸಚಿವರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ. ಜತೆಗೆ ನೆರೆಯ ಮಹಾರಾಷ್ಟ್ರದಿಂದಲೇ ನಮಗೆ ಅಲಾಟ್ ಮಾಡಿರುವುದರಿಂದ ಸರಬರಾಜಿಗೂ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
Advertisement
ಪದನಾಮ ಆದೇಶ
ಕಳೆದ ಆರು ತಿಂಗಳಿಂದ ಸಚಿವಾಲಯದಲ್ಲಿ ನನೆಗುದಿಗೆ ಬಿದ್ದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳ ಪದನಾಮ ಬದಲಾವಣೆ ಕಡತವನ್ನು ವಿಲೇವಾರಿ ಮಾಡಲಾಗಿದೆ. ಹೀಗಾಗಿ ಅನೇಕ ದಿನಗಳಿಂದ ಬಾಕಿ ಉಳಿದಿದ್ದ ಸಿಬ್ಬಂದಿ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಈ ನಿರ್ಧಾರದಿಂದ ಎಂಟು ಹುದ್ದೆಗಳ ಪದನಾಮವನ್ನು ಮರು ನಾಮಕರಣ ಮಾಡಲಾಗಿದೆ. ನೌಕರರ ಸಂಘದಿಂದ ಪದನಾಮ ಬದಲಾವಣೆಗೆ ಎರಡು , ಮೂರು ಸಲ ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಪದಾಧಿಕಾರಿಗಳ ನಿಯೋಗ ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಂದೆ ಕಿರಿಯ ಆರೋಗ್ಯ ಸಹಾಯಕರಿಗೆ (ಪುರುಷ) – ಆರೋಗ್ಯ ನಿರೀಕ್ಷಣಾಧಿಕಾರಿ ಎಂದು, ಹಿರಿಯ ಆರೋಗ್ಯ ಸಹಾಯಕರಿಗೆ (ಪುರುಷ) – ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂದು, ಆರೋಗ್ಯ ಮೇಲ್ವಿಚಾರಕರಿಗೆ – ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂದು, ಆರೋಗ್ಯ ಮೇಲ್ವಿಚಾರಕರನ್ನು (ಪತ್ರಾಂಕಿತ) – ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂದು, ಕಿರಿಯ ಆರೋಗ್ಯ ಸಹಾಯಕಿಗೆ (ಮಹಿಳೆ) – ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎಂದೂ, ಹಿರಿಯ ಆರೋಗ್ಯ ಸಹಾಯಕಿಗೆ (ಮಹಿಳೆ) – ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎಂದು ಜಿಲ್ಲಾ ಶುಶ್ರೂಷಣಾಧಿಕಾರಿ ಅವರನ್ನು – ಜಿಲ್ಲಾ ಶುಶ್ರೂಷಣಾಧಿಕಾರಿ ಎಂದು, ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್ ಹುದ್ದೆಗೆ – ಕಿರಿಯ/ಹಿರಿಯ ವಿಕಿರಣ ಚಿತ್ರಣ ಅಧಿಕಾರಿ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಭತ್ಯೆ ಕುರಿತು ಸಿಎಂ ಜತೆ ಚರ್ಚೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೋವಿಡ್ ಕರ್ತವ್ಯದಲ್ಲಿರುವ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಾದ ಶುಶ್ರೂಷಕರು, ಪ್ರಯೋಗಶಾಲೆ ತಂತ್ರಜ್ಞರು, ರೇಡಿಯಾಲಜಿ ಟೆಕ್ನಾಲಜಿಸ್ಟ್ಸ್, ಆರೋಗ್ಯ ಸಹಾಯಕರು, ಫಾರ್ಮಾಸಿಸ್ಟ್ಸ್, ವಾಹನ ಚಾಲಕರು ಮತ್ತು ಗ್ರೂಪ್ ಡಿ ನೌಕರರು ಕೂಡ ವಿಶೇಷ ಭತ್ಯೆ ಯೋಜನೆಯನ್ನು ತಮಗೂ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ.