ಚಾಮರಾಜನಗರ : ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ 10.30 ರಿಂದಲೂ ಆಕ್ಸಿಜನ್ ಸರಬರಾಜು ಮುಗಿದಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಆಮ್ಲಜನಕ ಕೊರತೆಯಿಂದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್ ಗಳು, 50 ಆಕ್ಸಿಜನ್ ಬೆಡ್ ಗಳು ಇವೆ. ಈಗ ಆಮ್ಲಜನಕ ಕೊರತೆಯಾಗಿರುವುದರಿಂದ ರೋಗಿಗಳಿಗೆ ಆಮ್ಲಜನಕ ಪೂರೈಕೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ 10 : 30 ರ ವರೆಗೆ ಸಾಕಾಗುವಷ್ಟು ಆಕ್ಸಿಜನ್ ದಾಸ್ತಾನು ಇತ್ತು.
ಮೈಸೂರಿನಿಂದ 2 ದಿನಗಳ ಹಿಂದಿನವರೆಗೂ ಆಮ್ಲಜನಕ ಪೂರೈಕೆ ಆಗುತ್ತಿತ್ತು. ಆದರೆ , ಮೈಸೂರು ಜಿಲ್ಲೆ ಹೊರತು ಪಡಿಸಿ ನೆರೆಯ ಜಿಲ್ಲೆಗೆ ಆಮ್ಲಜನಕ ಪೂರೈಕೆ ಮಾಡಬಾರದು ಎಂದು ಗ್ಯಾಸ್ ಏಜೆನ್ಸಿಗೆ ಆದೇಶಿಸಿರುವ ಕಾರಣ, ಜಿಲ್ಲೆಗೆ ಆಮ್ಲಜನಕ ಸಿಲಿಂಡರ್ ಗಳನ್ನು ನೀಡಿಲ್ಲ. ಹೀಗಾಗಿ ಇಂದು ಚಾ. ನಗರ ಜಿಲ್ಲಾಸ್ಪತ್ರೆಗೆ ಅಗತ್ಯ ಪ್ರಮಾಣದ ಸಿಲಿಂಡರ್ ಗಳು ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ
4-5 ದಿನಗಳ ಹಿಂದಷ್ಟೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕವನ್ನು ಆರಂಭಿಸಲಾಗಿದೆ. ಇದನ್ನು ಒಮ್ಮೆ ತುಂಬಿದರೆ 2 ದಿನಕ್ಕೆ ಆಗುವಷ್ಟು ಆಕ್ಸಿಜನ್ ಆಸ್ಪತ್ರೆಯ ರೋಗಿಗಳಿಗೆ ದೊರಕುತ್ತದೆ. ಈ ಆಕ್ಸಿಕನ್ ಇಂದು ರಾತ್ರಿ ಮುಗಿದ ಕಾರಣ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ.
ಈ ಘಟಕಕ್ಕೆ ಬಳ್ಳಾರಿಯಿಂದ ಟ್ಯಾಂಕರ್ ಮೂಲಕ ಆಮ್ಲಜನಕ ಹೊತ್ತ ವಾಹನ ಸೋಮವಾರ ಬೆ. 11 ಗಂಟೆ ವೇಳೆಗೆ ತಲುಪುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ಬೇಕಾಗುವಷ್ಟು ಆಮ್ಲಜನಕ ಸಿಲಿಂಡರ್ ಗಳು ದೊರಕದ ಕಾರಣ ರೋಗಿಗಳಿಗೆ ಆಮ್ಲಜನಕ ಪೂರೈಕೆಗೆ ಅಡಚಣೆ ಉಂಟಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಇದರಿಂದ ಕಂಗಾಲಾಗಿದ್ದಾರೆ.
ವಿಷಯ ತಿಳಿದ ಕೆಲವು ಪತ್ರಕರ್ತರು ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ತುರ್ತು ಪರಿಸ್ಥಿತಿಯನ್ನು ವಿವರಿಸಿದರು. ಇದಕ್ಕೆ ಸ್ಪಂದಿಸಿದ ಪ್ರತಾಪ್ ಸಿಂಹ ಅವರು ಮೈಸೂರಿನಿಂದ 50 ಆಕ್ಸಿಜನ್ ಸಿಲಿಂಡರ್ ಗಳನ್ನು ಚಾ.ನಗರಕ್ಕೆ ಕಳುಹಿಸುತ್ತಿರುವುದಾಗಿ ಮಧ್ಯರಾತ್ರಿ 12 ಕ್ಕೆ ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ, ಆಮ್ಲಜನಕ ಸಿಲಿಂಡರ್ ಪೂರೈಕೆ ಮುಗಿದಿರುವುದರಿಂದ ರೋಗಿಗಳು, ರೋಗಿಗಳ ಕುಟುಂಬದವರು ಹಾಗೂ ವೈದ್ಯರು ಆತಂಕಕ್ಕೀಡಾಗಿದ್ದಾರೆ. ಸೋಮವಾರ ಬೆಳಗಿನ ಜಾವ 2 ಗಂಟೆಯವರೆಗೂ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಗಳು ಬಂದಿರಲಿಲ್ಲ.
ಆಕ್ಸಿಜನ್ ಸಿಂಡರ್ ಖಾಲಿಯಾಗಿ ರೋಗಿಗಳ ಕಡೆಯವರು ಆತಂಕಕ್ಕೀಡಾಗಿದ್ದೇವೆ. ಅಗತ್ಯ ಪ್ರಮಾಣದ ಆಕ್ಸಿಜನ್ ಸಿಲಿಂಡರ್ ಗಳನ್ನು ಆಸ್ಪತ್ರೆಗೆ ಸಕಾಲಕ್ಕೆ ತರಿಸಿಕೊಳ್ಳುವುದು ಜಿಲ್ಲಾಡಳಿತದ ಕರ್ತವ್ಯ ಎಂದು ರೋಗಿಯ ಸಂಬಂಧಿಕರು ಅಭಿಪ್ರಾಯ ಪಟ್ಟಿದ್ದಾರೆ