ಶಿರಸಿ: ಜಿಲ್ಲೆಯಲ್ಲಿ ಯಲ್ಲಾಪುರದಲ್ಲಿ ಮಾತ್ರ ಆಕ್ಸಿಜನ್ ಉತ್ಪಾದನಾ ಘಟಕವಿದ್ದು ಇದೀಗ ಶಿರಸಿಗೂ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ತಿಳಿಸಿದರು. ಶುಕ್ರವಾರ ಪಂಡಿತ್ ಸಾರ್ವಜನಿಕ ಆಸ್ಪತ್ರೆ ವ್ಯವಸ್ಥೆ ಪರಿಶೀಲನೆ ನಡೆಸಿದ ಅವರು, ಜಿಲ್ಲೆಯಲ್ಲಿ ಘಟ್ಟದ ಮೇಲೆ ಶಿರಸಿ ಹಾಗೂ ಘಟ್ಟದ ಕೆಳಗೆ ಕಾರವಾರದಲ್ಲಿ ಘಟಕ ಸ್ಥಾಪಿಸಲಾಗುತ್ತದೆ.
ಶಿರಸಿ ಘಟಕ 90ಲಕ್ಷ ರೂ. ವೆಚ್ಚದಲ್ಲಿ ಸ್ಥಾಪನೆಯಾಗಲಿದ್ದು ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ತಿಂಗಳೊಳಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಟ್ಯಾಂಕ್‌ಗಳ ಕೊರತೆಯಿದೆ. ಜಂಭೋ ಸಿಲೆಂಡರ್ ಮೇಲೆ ಜಿಲ್ಲೆಯನ್ನು ನಡೆಸುತ್ತಿದ್ದೇವೆ. ಸಿಲೆಂಡರ್ ಖಾಲಿ ಆದಾಗ ತುಂಬಿಸಬೇಕು ಅದೆಲ್ಲಾ ಕಷ್ಟವಾಗುತ್ತದೆ. ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವಿದ್ದರೆ ದಿನಕ್ಕೆ 250ರೋಗಿಗಳನ್ನು ನಿಭಾಯಿಸಬಹುದು, ಆಕ್ಸಿಜನ್ ಕೊರತೆಯಾಗುವುದಿಲ್ಲ, ಭವಿಷ್ಯದ ದೃಷ್ಟಿಯಿಂದಲೂ ಇದು ಒಳ್ಳೆಯದು ಎಂದರು.
ಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು ವೈದ್ಯರು ಕೆಲಸ ಮಾಡುತ್ತಾರೆ. ಆದರೆ ಹೀಗೆ ಕೆಲಸ ಮಾಡುವಾಗ ರೋಗಿಗೆ ಆಗಿರುವ ತೊಂದರೆ ವಿಷಯವನ್ನು ವಾಸ್ತವಿಕವಾಗಿ ಅವರ ಕುಟುಂಬಕ್ಕೆ ತಿಳಿಸಬೇಕು. ಅದನ್ನು ಮುಚ್ಚಿಟ್ಟುಕೊಂಡರೆ ಆಸ್ಪತ್ರೆ, ವೈದ್ಯರ ಮೇಲೆ ಸಂಶಯಕ್ಕೆ ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ಸರಕಾರಿ ಆಸ್ಪತ್ರೆ ಸಿಬ್ಬಂದಿ ಸಂಶಯ ಬರುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದ ಅವರು, ಕೊರೊನಾ ವಿಷಯದಲ್ಲಿ ಭಯಪಡಬೇಕಾಗಿಲ್ಲ ಎಂದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ಟಿಎಚ್‌ಒ ಡಾ| ವಿನಾಯಕ ಕಣ್ಣಿ, ಡಾ| ಗಜಾನನ ಭಟ್ಟ ಇತರರು ಇದ್ದರು.