ಡಿಸಿಎಂ ಕಾರಜೋಳ-ಚರಂತಿಮಠ ಸಹಿತ ಜನಪ್ರತಿನಿಧಿಗಳ ಪ್ರಯತ್ನ | ಶೀಘ್ರವೇ ಸ್ಥಾಪನೆಗೊಳ್ಳಲಿದೆ ಆಮ್ಲಜನಕ ಕೇಂದ್ರ
ವರದಿ :ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಕೇಂದ್ರ ಸರ್ಕಾರ, ರಾಜ್ಯದಲ್ಲಿ 32 ಜೀವವಾಯು ಘಟಕ ಸ್ಥಾಪನೆಗೆ ಮುಂದಾಗಿದ್ದು, ಅದರಲ್ಲಿ ಬಾಗಲಕೋಟೆ ಜಿಲ್ಲೆಗೂ ಒಂದು ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಿದೆ. ಜಿಲ್ಲೆಯ ಜನಪ್ರತಿನಿಧಿಗಳ ಒಕ್ಕೋರಲ ಒತ್ತಾಯಕ್ಕೆ ಜಿಲ್ಲೆಗೂ ಜೀವ ವಾಯು ಉತ್ಪಾದನೆ ಘಟಕ ದೊರೆಯುತ್ತಿರುವುದಕ್ಕೆ ಸಂತಸ ವ್ಯಕ್ತವಾಗಿದೆ.
ಹೌದು, ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವ ಗೋವಿಂದ ಕಾರಜೋಳ, ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ, ಬೀಳಗಿಯ ಶಾಸಕರೂ ಆಗಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲೆಗೂ ಆಕ್ಸಿಜನ್ ಉತ್ಪಾದನೆ ಘಟಕ ಮಂಜೂರು ಮಾಡುವಂತೆ ಪ್ರಯತ್ನ ಮಾಡಿದ್ದರು. ಈ ವಿಷಯದಲ್ಲಿ ಡಿಸಿಎಂ ಕಾರಜೋಳರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸಂಪರ್ಕಿಸಿ, ರಾಜ್ಯಕ್ಕೆ ಮಂಜೂರು ಮಾಡಲಿರುವ 32 ಆಕ್ಸಿಜನ್ ಘಟಕಗಳಲ್ಲಿ ಬಾಗಲಕೋಟೆ ಜಿಲ್ಲೆಗೂ ಒಂದು ಘಟಕ ಕೊಡಲೇಬೇಕು. ಜಿಲ್ಲೆಗೆ ಈ ಘಟಕದ ಅಗತ್ಯ ಬಹಳಷ್ಟಿದೆ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬಾಗಲಕೋಟೆಗೆ ಆಕ್ಸಿಜನ್ ಘಟಕ ಮಂಜೂರು ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಡಿಸಿಎಂ ಕಾರಜೋಳ ಉದಯವಾಣಿಗೆ ತಿಳಿಸಿದ್ದಾರೆ.
ಆಕ್ಸಿಜನ್ ಪೂರೈಕೆಯಲ್ಲಿ ಹೆಚ್ಚಳ: ಜಿಲ್ಲೆಯ 450 ಬೆಡ್‌ನ ಜಿಲ್ಲಾ ಕೋವಿಡ್ ಆಸ್ಪತ್ರೆ, 500 ಬೆಡ್ ಗಳ ಕುಮಾರೇಶ್ವರ ಆಸ್ಪತ್ರೆಯ ಕೊರೊನಾ ಚಿಕಿತ್ಸೆ ವಿಭಾಗ ಸೇರಿದಂತೆ ಸಧ್ಯ ಜಿಲ್ಲೆಯಲ್ಲಿ 39 ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಗೆ ನಿತ್ಯ 3 ಕೆ.ಎಲ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನಿತ್ಯ 14 ಕೆಎಲ್ ಸೇರಿ ಒಟ್ಟು 17 ಕೆಎಲ್ ಆಕ್ಸಿಜನ್ ಬಳಕೆಯಾಗುತ್ತಿದೆ. ಆದರೆ, ಜಿಲ್ಲೆಗೆ ನಿತ್ಯ 7.50 ಕೆ.ಎಲ್ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಅದು ನಿಯಮಿತವಾಗಿ ಬರುತ್ತಿಲ್ಲ. ಹೀಗಾಗಿ ಬಳ್ಳಾರಿಯ ಜಿಂದಾಲ್ ಕಂಪನಿಗೆ ಜತೆಗೆ ಸಂಪರ್ಕ ಸಾಧಿಸಿದ ಡಿಸಿಎಂ ಕಾರಜೋಳ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳು, ಅತಿಹೆಚ್ಚು ಆಸ್ಪತ್ರೆ ಹೊಂದಿವೆ. ಉತ್ತರ ಕರ್ನಾಟಕದಲ್ಲೇ ಅತಿಹೆಚ್ಚು ಜಿಲ್ಲೆಯ ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿವೆ. ಹೀಗಾಗಿ ಬೆಳಗಾವಿ ಜಿಲ್ಲೆಗೆ 24 ಕೆ.ಎಲ್ ಹಾಗೂ ಬಾಗಲಕೋಟೆಗೆ ನಿತ್ಯ 13 ಕೆ.ಎಲ್. ಆಕ್ಸಿಜನ್ ಪೂರೈಸಬೇಕು ಎಂದು ತಿಳಿಸಿದ್ದು, ಜಿಲ್ಲೆಗೆ ನಿತ್ಯ 13 ಕೆಎಲ್ ಆಕ್ಸಿಜನ್ ಬರಲಿದೆ. ಹೀಗಾಗಿ ಜಿಲ್ಲೆಯಲ್ಲಿ ಉಂಟಾಗಿದ್ದ ಆಕ್ಸಿಜನ್ ಕೊರತೆ ಸದ್ಯಕ್ಕೆ ದೂರಾಗಲಿದ್ದು, ಅದು 20 ಕೆ.ಎಲ್.ಗೆ ಹೆಚ್ಚಿದರೆ, ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಕೂಡಾ ಲಭ್ಯವಾಗಲಿದೆ.
ರೆಮ್ ಡಿಸಿವಿಯರ್ ಪೂರೈಕೆಗೆ ಮನವಿ: ಕೇಂದ್ರ ಸಚಿವ ಸದಾನಗೌಡ ಅವರನ್ನು ರವಿವಾರ ಸಂಪರ್ಕ ಮಾಡಿದ ಡಿಸಿಎಂ ಗೋವಿಂದ ಕಾರಜೋಳ ಜಿಲ್ಲೆಗೆ ಅಗತ್ಯವಾದ ರೆಮ್ ಡಿಸಿವಿಯರ್ ಪೂರೈಸಲು ಮನವಿ ಮಾಡಿದ್ದಾರೆ. ಜಿಲ್ಲೆಗೆ ಈ ವರೆಗೆ ಸರ್ಕಾರಿ ಆಸ್ಪತ್ರೆಗೆ 2239, ಖಾಸಗಿ ಆಸ್ಪತ್ರೆಗೆ 3179 ಸೇರಿ 5418 ರೆಮ್ ಡಿಸಿವಿಯರ್ ಬಂದಿದ್ದು, ಅದರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 2206 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 3055 ಸೇರಿ ಒಟ್ಟು 5216 ರೆಮ್ ಡಿಸಿವಿಯರ್ ಬಳಕೆ ಮಾಡಲಾಗಿದೆ. ಸಧ್ಯ ಸರ್ಕಾರಿ ಆಸ್ಪತ್ರೆಗಳ್ಲಲಿ 33 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 124 ಸೇರಿ 157 ರೆಮ್ ಡಿಸಿವಿಯರ್ ಲಭ್ಯ ಇವೆ. ಜಿಲ್ಲೆಯಲ್ಲಿ ರೆಮ್ ಡಿಸಿವಿಯರ್ ಬೇಡಿಕೆ ದಿನವೂ ಹೆಚ್ಚುತ್ತಿದ್ದು, ಅಗತ್ಯ ಬೇಡಿಕೆಗೆ ತಕ್ಕಂತೆ ರೆಮ್‌ಡಿಸಿವಿಯರ್ ಪೂರೈಸಬೇಕು ಎಂದು ಸದಾನಂದಗೌಡ ಅವರಿಗೆ ಮನವಿ ಮಾಡಿದ್ದು, ಈ ವಾರದಲ್ಲಿ ಜಿಲ್ಲೆಗೆ ಚುಚ್ಚು ಮದ್ದು ಬರಲಿದೆ ಎಂದು ಡಿಸಿಎಂ ಕಾರಜೋಳ ತಿಳಿಸಿದರು.
ಹೆಚ್ಚುತ್ತಿರುವ ಸಾವು-ನೋವು: ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆಗೆ ಸಾವು-ನೋವು ಹೆಚ್ಚುತ್ತಲೇ ಇದೆ. ಶನಿವಾರ ಒಂದೇ ದಿನ 1500ಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿದೆ. ಇದು 1 ಮತ್ತು 2ನೇ ಅಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾದ ಪ್ರಸಂಗವಾಗಿದೆ. ಆದರೆ, ಆರೋಗ್ಯ ಇಲಾಖೆ ಹೇಳುವ ಪ್ರಕಾರ, ಸ್ಯಾಂಪಲ್‌ಗಳ ತಪಾಸಣೆ ನಾಲ್ಕು ದಿನಗಳಿಂದ ಬಾಕಿ ಇದ್ದವು. ಅವುಗಳ ರಿಜಲ್ಟ್ ಶನಿವಾರ ಬಂದಿದ್ದು, ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ ಎನ್ನುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಮತ್ತು ರೆಮ್ ಡಿಸಿವಿಯರ್ ಕೊರತೆ ನೀಗಿಸಲು ಜನಪ್ರತಿನಿಧಿ ಗಳು ಪ್ರಯತ್ನ ನಡೆಸಿದ್ದು, ಶೀಘ್ರವೇ ಆಕ್ಸಿಜನ್ ಉತ್ಪಾದನೆ ಘಟಕ ಸಿದ್ಧಗೊಂಡಲ್ಲಿ, ಆಸ್ಪತ್ರೆಗಳ ಹಬ್ ಆಗಿರುವ ಜಿಲ್ಲೆಗೆ ಆ ಕೊರತೆ ನೀಗಲಿದೆ.