ಆಗ್ರಾ: ಖಾಸಗಿ ಆಸ್ಪತ್ರೆಯಲ್ಲಿ ಅಣಕು ಕಾರ್ಯಾಚಣೆಗಾಗಿ ಮೆಡಿಕಲ್ ಆಕ್ಸಿಜನ್ ಸರಬರಾಜನ್ನು ಕಡಿತಗೊಳಿಸಲು ನಿರ್ದೇಶನ ನೀಡಿದ ಪರಿಣಾಮ 22 ಮಂದಿ ಕೋವಿಡ್ 19 ರೋಗಿಗಳು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಈ ವಿಡಿಯೋ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ನಡೆದಿದ್ದೇನು?
ನಮ್ಮಲ್ಲಿ ಆಕ್ಸಿಜನ್ ಕೊರತೆ ಎದುರಿಸುತ್ತಿದ್ದು, ಹಲವಾರು ಬಾರಿ ಮನವಿ ಮಾಡಿದರೂ ರೋಗಿಗಳನ್ನು ಡಿಸ್ ಚಾರ್ಜ್ ಮಾಡಲು ಸಿದ್ಧರಿಲ್ಲದ ಕಾರಣ, ನಾನು ಅಣಕು ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದೆ. ಹೀಗೆ ಏಪ್ರಿಲ್ 26ರಂದು ಬೆಳಗ್ಗೆ 7ಗಂಟೆಗೆ ನಾವು ಅಣಕು ಕಾರ್ಯಾಚರಣೆಗಾಗಿ ಆಕ್ಸಿಜನ್ ಸರಬರಾಜನ್ನು ನಿಲ್ಲಿಸಿದ್ದೇವು. ಕೂಡಲೇ 22 ಕೋವಿಡ್ ಸೋಂಕಿತ ರೋಗಿಗಳು ತೀವ್ರ ಉಸಿರಾಟದ ತೊಂದರೆಯಲ್ಲಿದ್ದು, ಆಕ್ಸಿಜನ್ ಇಲ್ಲದೆ ಅವರು ಬದುಕುಳಿಯಲಾರರು ಎಂಬುದು ತಿಳಿಯಿತು. ಕೂಡಲೇ ನಾವು ಉಳಿದ 74 ರೋಗಿಗಳ ಕುಟುಂಬದ ಸದಸ್ಯರಿಗೆ ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ವ್ಯವಸ್ಥೆ ಮಾಡುವಂತೆ ಸೂಚಿಸಿರುವುದಾಗಿ ಖಾಸಗಿ ಪರಾಸ್ ಆಸ್ಪತ್ರೆಯ ಮಾಲೀಕ ಅರಿಂಜನ್ ಜೈನ್ ಹೇಳಿದ್ದ ಎನ್ನಲಾದ 1.5 ನಿಮಿಷಗಳ ವಿಡಿಯೋ ಹರಿದಾಡುತ್ತಿದೆ. ಈ
ಬಗ್ಗೆ ಇನ್ನಷ್ಟೇ ಖಚಿತಪಡಿಸಬೇಕಾಗಿದೆ ಎಂದು ವರದಿ ವಿವರಿಸಿದೆ.
ವರದಿಯ ಆಧಾರದ ಮೇಲೆ ತನಿಖೆ ನಡೆಸುವಂತೆ ಆಗ್ರಾ ಮ್ಯಾಜಿಸ್ಟ್ರೇಟ್ ಪಿಎನ್ ಸಿಂಗ್ ಮತ್ತು ಸಿಎಂಒ ಆರ್ ಸಿ ಪಾಂಡೆ ಮಂಗಳವಾರ ಆದೇಶ ನೀಡಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಣಕು ಕಾರ್ಯಾಚರಣೆಯಿಂದ 22 ಮಂದಿ ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎನ್ನಲಾದ ವಿಡಿಯೋ ತುಣುಕಿನ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 22 ಮಂದಿ ಸಾವನ್ನಪ್ಪಿರುವ ಬಗ್ಗೆ ಯಾವುದೇ ವಿವರ ಲಭ್ಯವಾಗಿಲ್ಲ ಎಂದು ಡಿಎಂ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇತ್ತು, ಆದರೆ ನಾವು ನಂತರ ಆಕ್ಸಿಜನ್ ಸರಬರಾಜು ಮಾಡಿದ್ದೇವು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆ 22 ರೋಗಿಗಳು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ವಿಡಿಯೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.