ಶಿರಸಿ: ಜಿಲ್ಲೆಯ ಅತಿ ಹೆಚ್ಚು ರೋಗಿಗಳಿಂದ ಕೂಡಿರುವ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಂಬೋ ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಕೆಯಾಗುವ ಘಟಕದಲ್ಲಿ ಆಕ್ಸಿಜನ್ ಸೋರಿಕೆಯಾಗಿ ರೋಗಿಗಳಲ್ಲಿ, ಅಧಿ ಕಾರಿಗಳಲ್ಲಿ ಆತಂಕಕ್ಕೆ ಕಾರಣವಾದ ಘಟನೆ ಶನಿವಾರ ಬೆಳಗಿನ ಜಾವ ನಡೆಯಿತು.
ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ದಾಖಲಾಗಿದ್ದ ಕೆಲ ಸೋಂಕಿತರನ್ನು ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ಸರಕಾರಿ ಆಸ್ಪತ್ರೆಗಳಿಗೆ ಸಾಗಿಸುವ ಮೂಲಕ ಅಧಿ ಕಾರಿಗಳು ಸಮಯಪ್ರಜ್ಞೆ ಮೆರೆದು ಸಂಭವನೀಯ ದುರಂತ ತಪ್ಪಿಸಿದರು. ಉಳಿದವರಿಗೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ಆಕ್ಸಿಜನ್ ಲೀಕ್ ಆಗುವುದನ್ನು ಸರಿಪಡಿಸಲಾಗುತ್ತಿದೆ. ಯಾವುದೇ ರೀತಿಯಲ್ಲಿ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿಲ್ಲ. ಸುಮಾರು 10 ಸೋಂಕಿತರನ್ನು ಬೇರೆ ತಾಲೂಕು ಆಸ್ಪತ್ರೆಗಳಿಗೆ ಸೇರ್ಪಡೆ ಮಾಡಲಾಗಿದೆ. ಈ ರೀತಿ ಪೈಪ್‌ಲೈನ್‌ನಲ್ಲಿ ಎದುರಾಗುವ ತೊಂದರೆ ದೂರ ಮಾಡಲು ಉಪವಿಭಾಗದ ತಾಲೂಕುಗಳಲ್ಲಿ ಕಾರವಾರದ ನೇವಿ ಟೆಕ್ನಿಶಿಯನ್ ಒಬ್ಬರು ಇರಲಿದ್ದಾರೆ ಎಂದರು.
ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಗಜಾನನ ಭಟ್ಟ ಮಾತನಾಡಿ, ನೇರವಾಗಿ ಆಕ್ಸಿಜನ್ ಸಿಲಿಂಡರ್ ಪೈಪ್‌ಲೈನ್‌ಗೆ ನೀಡಲು ಆಗುವುದಿಲ್ಲ. ಒತ್ತಡ ಕಡಿಮೆ ಮಾಡಲು ಪ್ರತ್ಯೇಕ ಸಿಸ್ಟಮ್ ಇರುತ್ತದೆ. ಇದರ ಪ್ರೇಸರ್ ರೆಗ್ಯೂಲೇಟರ್, ವಾಲ್ ಹೋಗಿದೆ. ಇದೇ ಸಮಸ್ಯೆಗೆ ಕಾರಣವಾಯಿತು. ಅದನ್ನು ಬದಲಾಯಿಸಿದ್ದೇವೆ. ಜಾಸ್ತಿ ಲೋಡ್ ಆಗಿದ್ದರಿಂದ ಹೀಗೆ ಆಗಿದೆ. ಸಾಮಾನ್ಯವಾಗಿ 20 ಸಿಲಿಂಡರ್ ಸಾಮರ್ಥ್ಯ ಹೊಂದಿದ್ದರೂ ಆಕ್ಸಿಜನ್ ಜತೆಯಲ್ಲಿ ಲಿಕ್ವಿಡ್ ಮಿಶ್ರಣ ಮಾಡಿರುವುದರಿಂದ 10 ಸಿಲಿಂಡರ್‌ಗೆ ಒತ್ತಡ ಆಗಿದೆ. ಜತೆಯಲ್ಲಿ 20-25ರೋಗಿಗಳನ್ನು ನಿರ್ವಹಿಸುವ ಸಾಮರ್ಥ್ಯದ ಪೈಪ್‌ಲೈನ್‌ಗೆ 50 ಮಂದಿವರೆಗೆ ಆಕ್ಸಿಜನ್ ನೀಡುವ ಸಂದರ್ಭಗಳು ಬಂದಿದ್ದರಿಂದ ಲೋಡ್ ಆಗಿದೆ. ಇದರಿಂದ ಸಣ್ಣ ಸೋರಿಕೆ ಉಂಟಾಗಿತ್ತು. ಟೆಕ್ನಿಕಲ್ ಟೀಮ್ ಬಂದಿದ್ದು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಸೋರಿಕೆ ಪೈಪ್‌ಲೈನ್ ಒತ್ತಡ ಕಡಿಮೆ ಮಾಡಿದರೆ ಮಾತ್ರ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಹೀಗಾಗಿ ಕೆಲವರನ್ನು ಶಿಫ್ಟ್ ಮಾಡಿದ್ದೇವೆ ಎಂದರು. ಆಕ್ಸಿಜನ್ ಪೈಪ್‌ಲೈನ್ ಸೋರಿಕೆ ಸಂದರ್ಭದಲ್ಲಿ ಆಕ್ಸಿಜನ್‌ನಲ್ಲಿ 21 ಮಂದಿ ಸೋಂಕಿತರು ಇದ್ದರು. ಅದರಲ್ಲಿ ಒಂದೆರಡು ದಿವಸದಲ್ಲಿ ಬಿಡುಗಡೆ ಆಗಲಿರುವವರನ್ನು ಬೇರೆ ತಾಲೂಕುಗಳ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ.
4 ಸಿದ್ದಾಪುರ, 2 ಮುಂಡಗೊಡ, ಒಬ್ಬರನ್ನು ಯಲ್ಲಾಪುರ ಸರಕಾರಿ ಆಸ್ಪತ್ರೆಗೆ ಆಕ್ಸಿಜನ್‌ಯುಕ್ತ ಅಂಬ್ಯುಲೆನ್ಸ್ ಗಳಲ್ಲಿ ಕಳುಹಿಸಲಾಗಿದೆ. ಇನ್ನುಳಿದ ಮೂವರು ಖಾಸಗಿಗೆ ಹೋಗುತ್ತೇವೆ ಎಂದು ತೆರಳಿದ್ದಾರೆ ಎಂದರು. ಆಕ್ಸಿಜನ್ ಸಿಲಿಂಡರ್ ಪೈಪ್‌ಲೈನ್‌ನಲ್ಲಿ ಸೋರಿಕೆಯಾದರೂ ಆಸ್ಪತ್ರೆಯಲ್ಲಿ 29 ಸಿಲಿಂಡರ್ ಸಂಗ್ರಹ ಇತ್ತು. ಇದೀಗ ಮತ್ತೆ 20 ಸಿಲಿಂಡರ್ ಬಂದಿದೆ. ಸರಕಾರಿ ಆಸ್ಪತ್ರೆಯಲ್ಲಿ 18 ಮಂದಿ ಸೋಂಕಿತರು ಇದ್ದಾರೆ. ವೆಂಟೆಲೇಟರ್‌ನಲ್ಲಿ ಮೂರು ಮಂದಿ ಇದ್ದಾರೆ. ಇನ್ನು ಏಳು ವೆಂಟಿಲೇಟರ್ ನಮ್ಮಲ್ಲಿ ಇದೆ. ರೋಗಿಗಳು ಬಂದರೆ ನಮ್ಮಲ್ಲಿ ಯಾವುದೇ ತೊಂದರೆಯಿಲ್ಲ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದೂ ಗಜಾನನ ಭಟ್ಟ ಹೇಳಿದರು. ತಹಸೀಲ್ದಾರ ಎಂ.ಆರ್.ಕುಲಕರ್ಣಿ ಉಪಸ್ಥಿತರಿದ್ದರು.