Advertisement

ಗುಹೆಬಂಧಿ ಬಾಲರಿಗೆ ಆಮ್ಲಜನಕ ಕೊರತೆ

02:15 PM Jul 07, 2018 | Team Udayavani |

ಬ್ಯಾಂಕಾಕ್‌: ಥಾಯ್ಲೆಂಡ್‌ನ‌ ಗುಹೆಯಲ್ಲಿ ಸಿಲುಕಿಕೊಂಡ ಫ‌ುಟ್‌ಬಾಲ್‌ ತಂಡದ 12 ಬಾಲಕರು ಮತ್ತು ಕೋಚ್‌ರನ್ನು ಶೀಘ್ರವೇ ರಕ್ಷಿಸಬೇಕಾದ ಅನಿವಾರ್ಯತೆ ಈಗ ಉಂಟಾಗಿದೆ. ಗುಹೆಯಲ್ಲಿ ಆಮ್ಲಜನಕ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಆತಂಕಕಾರಿಮಟ್ಟ ತಲುಪಿದೆ.

Advertisement

ಆರಂಭದಲ್ಲಿ ನೀರಿನ ಮಟ್ಟ ಇಳಿಯುವವರೆಗೆ, ಅಂದರೆ ಮೂರ್‍ನಾಲ್ಕು ತಿಂಗಳವರೆಗೆ ಅವರನ್ನು ಅಲ್ಲೇ ಇಡುವ ಬಗ್ಗೆ ಥಾಯ್ಲೆಂಡ್‌ ಅಧಿಕಾರಿಗಳು ಯೋಚಿಸಿದ್ದರು. ಆದರೆ ಇದೀಗ, ಆಮ್ಲಜನಕ ಅಪಾಯಕಾರಿ ಮಟ್ಟ ತಲುಪಿದ್ದು, ರಕ್ಷಣಾ ಯೋಜನೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಮುಳುಗು ತಜ್ಞ ಸಾವು: ಗುಹೆಯಲ್ಲಿ ಸಿಲುಕಿಕೊಂಡವರಿಗೆ ಆಮ್ಲಜನಕ ಸಿಲಿಂಡರ್‌ ತಲುಪಿಸಿ ವಾಪಸಾಗುತ್ತಿರುವಾಗ ಆಮ್ಲಜನಕ ಕೊರತೆಯಿಂದಾಗಿ ನೌಕಾಪಡೆ ಸೀಲ್‌ನ ಮಾಜಿ ಮುಳುಗುತಜ್ಞ ಸಮನ್‌ ಕುನನ್‌ ಸಾವನ್ನಪ್ಪಿದ್ದಾರೆ. ವಾಪಸ್‌ ಬರುವಾಗ ಸಮನ್‌ ಬಳಿ ಸಾಕಷ್ಟು ಪ್ರಮಾಣದ ಆಮ್ಲಜನಕ ಇರಲಿಲ್ಲ ಎಂದು ಹೇಳಲಾಗಿದೆ.

ಜೊತೆಗಿದ್ದ ಮುಳುಗು ತಜ್ಞ ಇವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಫ‌ಲ ನೀಡಲಿಲ್ಲ. ಈ ಘಟನೆಯಿಂದಾಗಿ ಬಾಲಕರನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ಸಾಧ್ಯತೆಯ ಬಗ್ಗೆ ಆತಂಕ ಮೂಡಿದೆ. ನೌಕಾಪಡೆ ಸೀಲ್‌ನ ಮುಖ್ಯಸ್ಥ ಅಫಾಕೋರ್ನ್ ಯೂ ಕಾಂಗ್‌ಕೇವ್‌ ಹೇಳುವಂತೆ, ಗುಹೆಯಲ್ಲಿ ಆಮ್ಲಜನಕವು ಶೇ.15ರ ಮಟ್ಟಕ್ಕೆ ಕುಸಿದಿದ್ದು, ಇದರಿಂದಾಗಿ ಹೈಪಾಕ್ಸಿಯಾದಂತಹ ರೋಗ ಕಾಣಿಸಿಕೊಳ್ಳಬಹುದಾಗಿದೆ.

ಕೇಬಲ್‌ ಸಂಪರ್ಕಕ್ಕೆ ಪ್ರಯತ್ನ: ಈ ಬಾಲಕರು ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಮತ್ತು ಹೊರಜಗತ್ತಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವುದಕ್ಕಾಗಿ ಒಎಫ್ಸಿ ಕೇಬಲ್‌ ಸಂಪರ್ಕಿಸಲೂ ತಜ್ಞರು ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಗೆ ಕೇಬಲ್‌ ಮೂಲಕ ಆಕ್ಸಿಜನ್‌ ಪೂರೈಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

Advertisement

ಮತ್ತೆ ಮಳೆ ಭೀತಿ: ಶನಿವಾರ ಹಾಗೂ ಭಾನುವಾರ ಮತ್ತೆ ಭಾರಿ ಮಳೆ ಸುರಿಯುವ ಭೀತಿಯಿದ್ದು, ನೀರಿನ ಮಟ್ಟ ಗುಹೆಯಲ್ಲಿ ಏರುವ ಸಾಧ್ಯತೆಯಿದೆ. ಸದ್ಯ ಸೇನೆಯು ಗುಹೆಯಲ್ಲಿನ ನೀರನ್ನು ಹೊರಹಾಕುತ್ತಿದೆ. ಆದರೆ ನೀರಿನ ಮಟ್ಟವನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ರಕ್ಷಣೆ ಸಾಧ್ಯತೆಯೇನು?: ಸಿಲುಕಿಕೊಂಡಿರುವ ಕೆಲವು ಬಾಲಕರಿಗೆ ಈಜಲೂ ತಿಳಿದಿಲ್ಲ. ಅಲ್ಲದೆ ಅವರಿಗೆ ಈಜುವ ಸಲಕರಣೆಗಳನ್ನು ಧರಿಸಲು ಮತ್ತು ಅದನ್ನು ಬಳಸಿ ಈಜಲು ಹೇಳಿಕೊಟ್ಟು ಹೊರಗೆ ಕರೆತರುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಇದು ಅವರ ಸಾವು ಬದುಕಿನ ಪ್ರಶ್ನೆಯೂ ಆಗಲಿದೆ. ಈ ಮಧ್ಯೆಯೇ ಗುಹೆಗೆ ಸಮೀಪದ ಪರ್ವತ ಪ್ರದೇಶಗಳಿಂದ ಇರಬಹುದಾದ ಗುಹೆ ಸಂಪರ್ಕದ ಬಗ್ಗೆಯೂ ಹುಡುಕಾಟ ನಡೆಸಲಾಗುತ್ತಿದೆ. ಈವರೆಗೆ ಇದು ಫ‌ಲ ನೀಡಿಲ್ಲ.

ಸಿಲುಕಿಕೊಂಡಿದ್ದು ಹೇಗೆ?: ಥಾಯ್ಲೆಂಡ್‌ನ‌ 10 ಕಿ.ಮೀ ಉದ್ದದ ಸುರಂಗಕ್ಕೆ ಪ್ರವಾಸಕ್ಕಾಗಿ ಕೋಚ್‌ ಜೊತೆಗೆ ತೆರಳಿದ್ದ 11 ರಿಂದ 13 ವರ್ಷದೊಳಗಿನ ಬಾಲಕರು, ಮಳೆಯಿಂದಾಗಿ ನೀರಿನ ಮಟ್ಟ ಏರಿಕೆಯಾಗಿ, ಪ್ರವೇಶದ್ವಾರ ಮುಚ್ಚಿದ್ದರಿಂದ ಹೊರಬರಲಾಗದಂತಾಗಿತ್ತು. ಪ್ರವೇಶದ್ವಾರದಿಂದ 4 ಕಿ.ಮೀ ದೂರದಲ್ಲಿರುವ ಒಂದು ಎತ್ತರದ ಪೊಟರೆಯಲ್ಲಿ ಆಸರೆ ಪಡೆದಿದ್ದರು.

10 ದಿನಗಳ ನಂತರ ಇವರನ್ನು ಬ್ರಿಟಿಷ್‌ ಮುಳುಗುತಜ್ಞರು ಕಂಡು ಹಿಡಿದಿದ್ದು, ಅಂದಿನಿಂದಲೂ ಇವರಿಗೆ ಆಹಾರ ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ಮುಳುಗು ತಜ್ಞರು ಒದಗಿಸುತ್ತಿದ್ದಾರೆ. 12 ಬಾಲಕರ ಪೈಕಿ ಕೆಲವರಿಗೆ ಈಜಲೂ ಬರದ್ದರಿಂದ ಇವರನ್ನು ರಕ್ಷಿಸುವುದು ಕಷ್ಟಸಾಧ್ಯವಾಗಿದೆ. ವಿವಿಧ ದೇಶಗಳ ಮುಳುಗು ತಜ್ಞರು ಸಹಾಯಕ್ಕೆ ಧಾವಿಸಿದ್ದರಾದರೂ, ಈ ಗುಹೆಯ ಪ್ರವೇಶ ದ್ವಾರವನ್ನು ತಲುಪಲು ಮುಳುಗು ತಜ್ಞರಿಗೆ ಕನಿಷ್ಠ ಆರು ಗಂಟೆಗಳವರೆಗೆ ಈಜಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next