Advertisement

ಹೆಬ್ರಿ ತಾಲೂಕು ಕೇಂದ್ರದಲ್ಲಿ ಅಂಚೆ ಕಚೇರಿಗಿಲ್ಲ ಸ್ವಂತ ಕಟ್ಟಡ

07:44 PM Jan 11, 2022 | Team Udayavani |

ಹೆಬ್ರಿ: ತಾಲೂಕು ಕೇಂದ್ರವಾದ ಹೆಬ್ರಿ ಯಲ್ಲಿ ಅಂಚೆ ಕಚೇರಿ ಆರಂಭಗೊಂಡು ಸುಮಾರು 125 ವರ್ಷ ಕಳೆದರೂ ಇನ್ನು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

Advertisement

ಹೆಬ್ರಿ ವಿನುನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಇದ್ದ ಅಂಚೆ ಕಚೇರಿಯನ್ನು ಕಳೆದ ವಾರ ಯಾವುದೇ ಪ್ರಚಾರ ಇಲ್ಲದೆ ಕುಚ್ಚಾರು ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು ಜನಸಮಾನ್ಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಅಂಚೆ ಕಚೇರಿಗೆ ಸಂಧ್ಯಾ ಸುರಕ್ಷಾ, ಪಿಂಚಣಿ ಸೇರಿದಂತೆ ಇತರ ಕಾರ್ಯಗಳಿಗಾಗಿ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ವಯೋವೃದ್ಧರು ಹೆಚ್ಚಾಗಿ ಅಂಚೆಕಚೇರಿಗೆ ಬರುತ್ತಾರೆ. ಆದರೆ ಕಚೇರಿ ಒಂದನೇ ಮಹಡಿಯಲ್ಲಿ ಇರುವುದರಿಂದ ಮೇಲೆ ಹತ್ತಿಹೋಗಲು ಅವ ರಿಗೆ ಸಮಸ್ಯೆಯಾಗುತ್ತಿದೆೆ. ಕಟ್ಟಡದಲ್ಲಿ ಲಿಫ್ಟ್‌ ವ್ಯವಸ್ಥೆ ಇದ್ದರೂ ಹಳ್ಳಿಗಾಡಿನ ವಯೋ ವೃದ್ಧರಿಗೆ ಅದನ್ನು ಬಳಕೆ ಮಾಡಲು ತಿಳಿಯದೆ ಕಾರಣ ಅಂಚೆ ಕಚೇರಿ ಸ್ಥಳಾಂತರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸಿಬಂದಿ ಕೊರತೆ
125 ವರ್ಷಗಳ ಇತಿಹಾಸವಿರುವ ಹೆಬ್ರಿ ಅಂಚೆ ಕಚೇರಿಯಲ್ಲಿ ಸಿಬಂದಿ ಕೊರತೆ ಇದೆ. 60 ವರ್ಷಗಳಿಂದ ಇಬ್ಬರು ಪೋಸ್ಟ್‌ ಮ್ಯಾನ್‌ಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು 60 ವರ್ಷಗಳಿಂದ ಜನಸಂಖ್ಯೆ ಹೆಚ್ಚಾದರೂ ಇವರಿಬ್ಬರೇ ತಿರುಗಬೇಕು. ಇದೀಗ ಹೆಬ್ರಿ ತಾಲೂಕು ಕೇಂದ್ರವಾಗಿರುವುದರಿಂದ ಇನ್ನು ಹೆಚ್ಚಿನ ಸಿಬಂದಿ ಜತೆ ತನ್ನ ಸ್ವಂತ ಕಟ್ಟಡದಲ್ಲಿ ತಾ| ಅಂಚೆ ಕಚೇರಿಯಾಗಿ ಮೇಲ್ದರ್ಜೆಗೇರಬೇಕಾಗಿದೆ.

ಸರಕಾರಿ ಕಟ್ಟಡದಲ್ಲಿ ಅವಕಾಶ ನೀಡಿ
ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಬದಲು ಖಾಲಿ ಇರುವ ಸರಕಾರಿ ಕಟ್ಟಡದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಅವಕಾಶ ಕಲ್ಪಿಸುವಂತೆ ಹಲವು ಬಾರಿ ಸಂಬಂಧಪಟ್ಟವರಿಗೆ ಹಾಗೂ ಸ್ಥಳೀಯ ಪಂಚಾಯತ್‌ಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಸ್ವಂತ ಜಾಗವಿದೆ ಕಟ್ಟಡವಿಲ್ಲ
ಹೆಬ್ರಿ ಅಂಚೆ ಕಚೇರಿಗೆ ಎಂದು ಇಲ್ಲಿನ ಅರಣ್ಯ ಇಲಾಖೆಯ ಕಚೇರಿ ಸಮೀಪ 25 ಸೆಂಟ್ಸ್‌ ಜಾಗವನ್ನು ಕಾದಿರಿಸಲಾಗಿದೆ. ಆದರೂ 125 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಪ್ರತಿಭಟನೆಯ ಎಚ್ಚರಿಕೆ
ಹೆಬ್ರಿ ತಾಲೂಕಿನಲ್ಲಿ ಅಂಚೆ ಕಚೇರಿಯ ಬೇಡಿಕೆಗಳನ್ನು ಹಾಗೂ ಜನಸಾಮಾನ್ಯರಿಗೆ ಆಗುವ ಸಮಸ್ಯೆಯನ್ನು ಆದಷ್ಟು ಶೀಘ್ರದಲ್ಲಿ ಸರಿಪಡಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಜೀವ ಶೆಟ್ಟಿ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ವಿಭಾಗೀಯ ಕಚೇರಿ
ಹೆಬ್ರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಗಳಿಗೆ ವಿಭಾಗೀಯ ಕಚೇರಿ ಇರುವುದು ದೂರದ ಪುತ್ತೂರಿನಲ್ಲಿ ಎಂದರೆ ಅಚ್ಚರಿ ಪಡಬೇಕಾಗಿಲ್ಲ. ಕೇವಲ 32 ಕಿ.ಮೀ. ದೂರವಿರುವ ಉಡುಪಿ ವಿಭಾಗೀಯ ಕಚೇರಿಯನ್ನು ಬಿಟ್ಟು ದೂರದ ಪುತ್ತೂರಿಗೆ ಹೋಗಿ ಬರುವುದು ಕಷ್ಟ ವಾದರೂ ಯಾಕೆ ಇನ್ನೂ ಬದಲಾಯಿಸಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿ. ಹೆಬ್ರಿ ತಾಲೂಕಿನ ಎಲ್ಲ ಅಂಚೆ ಕಚೇರಿಗಳ ವಿಭಾಗೀಯ ಕಚೇರಿಯಾಗಿ ಹತ್ತಿರದ ಉಡುಪಿ ವಿಭಾಗೀಯ ಅಂಚೆ ಕಚೇರಿಗೆ ವರ್ಗಾಯಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ, ಅಂಜೆ ಇಲಾಖೆಯ ಮುಖ್ಯಸ್ಥರಿಗೆ ಸಂಜೀವ ಶೆಟ್ಟಿ ಮನವಿ ಸಲ್ಲಿಸಿದ್ದಾರೆ.

ಜನರಿಗೆ ಸಮಸ್ಯೆಯಾಗದಂತೆ ನಿರ್ಧಾರ
ಈ ಹಿಂದೆ ಇದ್ದ ಅಂಚೆ ಕಚೇರಿಯಲ್ಲಿ ದಿನನಿತ್ಯ ಆಧಾರ್‌ ನೊಂದಣಿಗೆ ನೂರಾರು ಜನ ಬರುತ್ತಿದ್ದರು.ಆದರೆ ಈ ಪರಿಸರದಲ್ಲಿ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲರಿಂದ ಸಮಸ್ಯೆಯಾಗುತ್ತಿತ್ತು.ಅಲ್ಲದೆ ಹೆಬ್ರಿ ಇದೀಗ ತಾಲೂಕು ಕೇಂದ್ರವಾಗಿದ್ದರಿಂದ ಸಮರ್ಪಕವಾದ ಜಾಗಬೇಕು ಜನರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಅಂಚೆ ಕಚೇರಿಗೆ ಮೀಸಲಿಟ್ಟ ಸರಕಾರಿ ಜಾಗ ವಲಯ ವನ್ಯ ಜೀವಿ ವಿಭಾಗಕ್ಕೆ ಸೇರಿದೆ ಎಂಬ ಇಲಾಖೆಯ ವಿರೋಧವಿರುವುದರಿಂದ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂ ಪರಿಶೀಲನೆಯ ಹಂತದಲ್ಲಿದೆ.
– ಏಂಜಲ್‌ರಾಜ್‌, ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗೀಯ ಅಂಚೆ ಇಲಾಖೆ

ಹಲವು ವರ್ಷಗಳ ಇತಿಹಾಸ
ಅಂಚೆ ಕಚೇರಿಗೆಂದು ಸ್ವಂತ ಸ್ಥಳ ಕಾದಿರಿಸಿದ್ದರೂ ಕೂಡ ಅಲ್ಲಿ ಕಟ್ಟಡವನ್ನು ತೆರೆಯದೆ ಬಾಡಿಗೆ ಕಟ್ಟಡವನ್ನೇ ಆವಲಂಬಿಸಿರುವುದು ದುರಾದೃಷ್ಟಕರವಾಗಿದೆ. ಹಲವು ವರ್ಷ ಗ ಳ ಇತಿಹಾಸವಿರುವ ಅಂಚೆ ಕಚೇರಿಗೆ ಸ್ವಂತ ಕಟ್ಟಡ ತೀರಾ ಅಗತ್ಯ. ಹೆಬ್ರಿ ತಾಲೂಕು ಕೇಂದ್ರ ಆಗಿರುವುದರಿಂದ ತಾಲೂಕು ಅಂಚೆ ಕಚೇರಿಯ ಕಟ್ಟಡ ಪ್ರಮುಖ ಪಾತ್ರ ವಹಿಸುತ್ತದೆ.
– ಕೆರೆಬೆಟ್ಟು ಸಂಜೀವ ಶೆಟ್ಟಿ
ಅಧ್ಯಕ್ಷರು, ಪ್ರಗತಿಪರ ನಾಗರಿಕ ಸಮಿತಿ, ಹೆಬ್ರಿ

ಅನುದಾನ ಒದಗಿಸಿ
ಈ ಭಾಗದ ಜನರ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಮತ ಪಡೆದು ಕೇಂದ್ರ ಅಧಿಕಾರಕ್ಕೆ ಏರಿದ ಸಂಸದೆ ಶೋಭಾ ಕರಂದ್ಲಾಜೆ ಅವರು ಹೆಬ್ರಿಗೆ ಇನ್ನೂ ಸ್ವಂತ ಕಟ್ಟಡದ ಅಂಚೆ ಕಚೇರಿಯನ್ನು ತೆರೆಯಲು ಸಾಧ್ಯವಾಗದಿರುವುದು ವಿಪರ್ಯಾಸ.ಇನ್ನಾದರೂ ಈ ಭಾಗದ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಅಂಚೆ ಕಚೇರಿಯನ್ನು ತನ್ನ ಸ್ವಂತ ಜಾಗದಲ್ಲಿ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಲಿ.
-ನೀರೆ ಕೃಷ್ಣ ಶೆಟ್ಟಿ
ಮಾಜಿ ಅಧ್ಯಕ್ಷರು, ಹೆಬ್ರಿ ಗ್ರಾ.ಪಂ.

– ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next