Advertisement
ನಗರದ ಸಿಲ್ಕ್ ಬೋರ್ಡ್ ಜಂಕ್ಷನ್-ಕೆ.ಆರ್. ಪುರ ನಡುವೆ ಪರಿಚಯಿಸಲಾದ “ಬಸ್ ಆದ್ಯತಾ ಪಥ’ (ಬಿಪಿಎಲ್)ದಿಂದ ಆ ಮಾರ್ಗದಲ್ಲಿ ಸಂಚಾರ ಸಮಯ ಉಳಿತಾಯ ಮಾತ್ರವಲ್ಲ; ಪ್ರಯಾಣಿಕರ ಸಾಮಾಜಿಕ-ಆರ್ಥಿಕ ಬದಲಾವಣೆ ಮೇಲೂ ಪೂರಕ ಪರಿಣಾಮ ಬೀರಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಈ ಮಾರ್ಗದಲ್ಲಿ ಅತಿ ಹೆಚ್ಚು ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಆದರೆ, ಅವುಗಳ ವೇಗ ಮಿತಿ ಗಂಟೆಗೆ ಕೇವಲ 10 ಕಿ.ಮೀ.ಗಿಂತ ಕಡಿಮೆ ಆಗಿದೆ. ಕೇವಲ 18 ಕಿ.ಮೀ. ಕ್ರಮಿಸಲು ಎರಡರಿಂದ ಎರಡೂವರೆ ತಾಸು ಸಮಯ ವ್ಯಯ ಆಗುತ್ತಿದೆ.
Related Articles
Advertisement
ಸಮೂಹ ಸಾರಿಗೆ ವ್ಯವಸ್ಥೆಗೆ ಹೀಗೆ ಪ್ರತ್ಯೇಕ ಪಥ ಮೀಸಲಿಡುವುದು ಸ್ವಾಗತಾರ್ಹ. ಆದರೆ, ಕೇವಲ ಒಂದು ಮಾರ್ಗದಲ್ಲಿ ಇದನ್ನು ಅನಸು ರಿಸುವುದರಿಂದ ನಿರೀಕ್ಷಿತಮಟ್ಟದಲ್ಲಿ ಪ್ರಯೋಜನವಾಗುವುದಿಲ್ಲ. ಇದರ ಜಾಲವನ್ನು ವಿಸ್ತರಣೆ ಮಾಡುವುದರ ಜತೆಗೆ ಒಂದಕ್ಕೊಂದು ಜೋಡಣೆ ಮಾಡಬೇಕು. ಇದಲ್ಲದೆ, ಮುಂದಿನ ದಿನಗಳಲ್ಲಿ ಮೆಟ್ರೋಗೂ ಇದನ್ನು ಲಿಂಕ್ ಮಾಡಬೇಕು. ಆಗ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯತ್ತ ಆಕರ್ಷಿತರಾಗು ತ್ತಾರೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮೂಲ ಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಆಶಿಶ್ ವರ್ಮ ಅಭಿಪ್ರಾಯಪಡುತ್ತಾರೆ.
ಪ್ರಾಯೋಗಿಕ ಚಾಲನೆ: ನಗರದ ಸಂಚಾರದಟ್ಟಣೆ ತಗ್ಗಿಸಲು ಬಿಬಿಎಂಪಿ, ಬಿಎಂಟಿಸಿ ಮತ್ತು ಸಂಚಾರ ಪೊಲೀಸರ ಸಹಯೋಗದಲ್ಲಿ ನಿರ್ಮಿಸಿದ ಬಿಪಿಎಲ್‌ಗೆ ಭಾನುವಾರ ಬೆಳಗ್ಗೆ ಪ್ರಾಯೋಗಿಕ ಚಾಲನೆ ದೊರೆಯಿತು. ಸಾರ್ವಜನಿಕ ಸಾರಿಗೆಗೆ ಪ್ರಯಾಣಿಕರನ್ನು ಸೆಳೆಯುವುದು ಉದ್ದೇಶದಿಂದ ಕೆಆರ್‌ಪುರ-ಸಿಲ್ಕ್ಬೋರ್ಡ್ ನಡುವೆ ಈ ಪಥ ನಿರ್ಮಿಸಲಾಗಿದ್ದು, ವಿಮಾನ ನಿಲ್ದಾಣದತ್ತ ಸಾಗುವ ವೋಲ್ವೋ ಬಸ್ ಸೇರಿದಂತೆ ಹಲವು ಬಸ್‌ಗಳು ಭಾನುವಾರ ಕಾರ್ಯಾಚರಣೆ ಮಾಡಿದವು. ಮಾರತಹಳ್ಳಿಯ ಮೇಲ್ಸೇತುವೆ ಬಳಿ ಭಾನುವಾರ ಮುಂಜಾನೆ ಎಂದಿನಂತೆ ಸಾಮಾನ್ಯ ರಸ್ತೆಯಲ್ಲಿ ಸಾಗುತ್ತಿದ್ದ ಬಸ್‌ಗಳು ಬೆಳಗ್ಗೆ 9ರ ಸುಮಾರಿಗೆ ಬೋಲಾಡ್ಸ್ ಬೇಲಿಯ ಒಳಗೆ ಓಡಾಟ ಆರಂಭಿಸಿದವು.
ಹೀಗಾಗಿ, ನೆರೆ ಹೊರೆಯವರಿಗೂ ಬಸ್ ಸಂಚಾರ ವಿಶೇಷ ಎನಿಸಿತು. ಏಕೆ ಹೀಗೆ ಎಂಬ ಪ್ರಶ್ನೆ ಕೂಡ ಅವರಲ್ಲಿ ಕೆಲ ಕಾಲ ಮೂಡಿತ್ತು. ಸ್ಥಳದಲ್ಲಿದ್ದ ಸಾರಿಗೆ ಸಂಸ್ಥೆಗಳ ಅಧಿಕಾರಿಗಳ ಮಾಹಿತಿ ನೀಡಿದಾಗ ಅವರಲ್ಲಿದ್ದ ಕುತೂಹಲ ದೂರವಾಯಿತು. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಂಬಂಧ ಇಂತಹ ಯೋಜನೆಗಳ ಅವಶ್ಯಕತೆ ಇದೆ. ಅದಷ್ಟು ಬೇಗ “ಪ್ರತ್ಯೇಕ ಬಸ್ ಪಥ’ ಸಿಲಿಕಾನ್ ಸಿಟಿಯ ಎಲ್ಲ ಕಡೆ ನೋಡವಂತಾಗಬೇಕು ಎಂದು ಉತ್ತರ ಪ್ರದೇಶದ ಮೂಲದ ಸಾಫ್ಟ್ವೇರ್ ಉದ್ಯೋಗಿ ಮೋನಿಕಾ ಹೇಳಿದರು.
ಬಸ್ ಪಥದಲ್ಲೇ ಇತರ ಸವಾರರು!: ಹೆಬ್ಬಾಳ ಕಡೆಯಿಂದ ಸೀಲ್ಕ್ ಬೋರ್ಡ್ ಕಡೆಗೆ ಸಾಗುತ್ತಿದ್ದ ಬೈಕ್, ಆಟೋರಿಕ್ಷಾ ಹಾಗೂ ಕಾರ್ ಚಾಲಕರು ಪ್ರತ್ಯೇಕ ಬಸ್ ಪಥದಲ್ಲೇ ಸಾಗಿದರು. ಅವರಿಗೆ ಬಸ್‌ಗಳ ಪ್ರಯೋಗಿಕ ಓಡಾಟಕ್ಕಾಗಿ ಈ ರಸ್ತೆ ನಿರ್ಮಾಣವಾಗಿದೆ ಎಂಬುವುದು ತಿಳಿದಿರಲಿಲ್ಲ. ಅಲ್ಲದೆ ಸ್ಥಳದಲ್ಲಿದ್ದ ಸಂಬಂಧ ಪಟ್ಟ ಸಾರಿಗೆ ಅಧಿಕಾರಿಗಳು ಕೂಡ ಅವರಿಗೆ ತಿಳಿಹೇಳುವ ಕೆಲಸ ಮಾಡಲಿಲ್ಲ. ಹೀಗಾಗಿಯೇ ಬೆಳಗ್ಗೆಯಿಂದ ಸಂಜೆಯ ವರೆಗೂ ಬೈಕ್, ಆಟೋರಿಕ್ಷಾ ಮತ್ತು ಕಾರು ಚಾಲಕರು ಪ್ರತ್ಯೇಕ ಬಸ್‌ಪಥದಲ್ಲಿ ಸಾಗಿದರು. ಈ ಬಗ್ಗೆ ಪ್ರಶ್ನಿಸಿದಾಗ ವಿಶೇಷ ಪಥ ಎಂಬುವುದೇ ತಿಳಿದಿರಲಿಲ್ಲ. ಬಿಎಂಟಿಸಿ ಬಸ್‌ಗಳು ಸಾಗುತ್ತಿವೆಯಲ್ಲಾ ಆ ಕಾರಣದಿಂದಾಗಿಯೇ ಬಸ್ ಹಿಂಬಾಲಿಸಿ ಆ ರಸ್ತೆಯಲ್ಲಿ ಬಂದೆ ಎಂದು ಎಚ್‌ಎಸ್‌ಆರ್ ಲೇಔಟ್ ಮೂಲದ ಆಟೋರಿಕ್ಷಾ ಚಾಲಕ ರಮೇಶ್ ಹೇಳಿದರು.
ಹೊಸ ರಸ್ತೆಗಳಲ್ಲಿ ಪ್ರತ್ಯೇಕ ಪಥ; ಬಿಎಂಟಿಸಿ: ನಗರದಲ್ಲಿ ಇನ್ನುಮುಂದೆ ನಿರ್ಮಾಣಗೊಳ್ಳುವ ಮತ್ತು ಅಭಿವೃದ್ಧಿಪಡಿಸುವ ಮುಖ್ಯರಸ್ತೆಗಳಲ್ಲಿ ಬಸ್‌ಗಾಗಿ ಪ್ರತ್ಯೇಕ ಪಥ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಎಂಟಿಸಿ ಚಿಂತನೆ ನಡೆಸಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಸ್ತೆ ನಿರ್ಮಿಸುವಾಗಲೇ ಬಸ್ ಸಂಚಾರಕ್ಕೆ ಪಥ ಮೀಸಲಿಡಬೇಕು. ಇದರಿಂದ ವಾಯುಮಾಲಿನ್ಯ ತಗ್ಗುವುದರ ಜತೆಗೆ ವಾಹನಗಳ ದಟ್ಟಣೆಯೂ ಕಡಿಮೆ ಆಗಲಿದೆ. ವಾಹನ ಸವಾರರು ಕೂಡ ಬಸ್‌ಗಳತ್ತ ಮುಖಮಾಡುತ್ತಾರೆ ಎಂದು ಬಿಎಂಟಿಸಿ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಇಂತಹದ್ದೊಂದು ಪ್ರಸ್ತಾವನೆಯನ್ನು ಬಿಎಂಟಿಸಿ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಮುಂದಿಟ್ಟಿದ್ದಾರೆ. ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ವಾಹನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಪಥ ಮೀಸಲಿಡುವ ಬೇಡಿಕೆ ಇಡಲಾಗಿದೆ. ಇದರ ಸಾಧ್ಯ-ಅಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇತರೆ ಬಸ್‌ಗಳಿಗೂ ಅವಕಾಶ ಕೊಡಿ: ಬಸ್ ಪಥದಲ್ಲಿ 10 ಆಸನಗಳಿಗಿಂತ ಹೆಚ್ಚು ಸಾಮರ್ಥ್ಯದ ಖಾಸಗಿ ವಾಹನಗಳಿಗೂ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಹೊರವರ್ತುಲ ರಸ್ತೆ ಕಂಪನಿಗಳ ಅಸೋಸಿಯೇಷನ್ (ಓಆರ್‌ಆರ್‌ಸಿಎ) ನವೀನ್ ಒತ್ತಾಯಿಸುತ್ತಾರೆ. ಈ ಮಾರ್ಗದಲ್ಲಿರುವ ಕಂಪನಿಗಳು ನಗರದ ಒಟ್ಟಾರೆ ಆದಾಯದಲ್ಲಿ ಶೇ. 32ರಷ್ಟು ಕೊಡುಗೆ ನೀಡುತ್ತವೆ. ಹೊರವರ್ತುಲ ರಸ್ತೆಯಲ್ಲಿ ಸುಮಾರು 19 ಲಿಂಕ್ ರಸ್ತೆಗಳು ಬರುತ್ತವೆ. ನಗರದ ಹೊರವರ್ತುಲ ರಸ್ತೆಯಲ್ಲಿ ಸುಮಾರು 300 ಕಂಪನಿಗಳು ಬರುತ್ತವೆ. ಲಕ್ಷಾಂತರ ಜನ ಇಲ್ಲಿ ಕೆಲಸ ಮಾಡುತ್ತಿದ್ದು, ಕೆಲ ಕಂಪನಿಗಳು ಸ್ವಂತ ವಾಹನಗಳ ವ್ಯವಸ್ಥೆ ಹೊಂದಿವೆ. ಆದರೆ, ಸಂಚಾರದಟ್ಟಣೆಯಿಂದ ಗಂಟೆಗಟ್ಟಲೆ ರಸ್ತೆಯಲ್ಲಿ ಕಳೆಯಬೇಕಿದೆ. ಹಾಗಾಗಿ, ಅವರ ಅನುಕೂಲಕ್ಕಾಗಿ ಹತ್ತು ಆಸನಗಳಿಗಿಂತ ಹೆಚ್ಚು ಸಾಮರ್ಥ್ಯದ ವಾಹನಗಳಿಗೂ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ನವೀನ್ ಮನವಿ ಮಾಡಿದ್ದಾರೆ.
ಫ್ರಿಕ್ವೆನ್ಸಿ ನಿರ್ವಹಣೆ ಸವಾಲು: ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್. ಪುರ ನಡುವೆ ಕೇವಲ 27 ಸೆಕೆಂಡ್‌ಗಳ ಅಂತರದಲ್ಲಿ ಬಸ್‌ಗಳು ಕಾರ್ಯಾಚರಣೆ ಮಾಡುವುದರಿಂದ ಆದ್ಯತಾ ಪಥದ ಎರಡೂ ತುದಿಗಳಲ್ಲಿ ನಿಭಾಯಿಸುವುದೇ ಬಿಎಂಟಿಸಿಗೆ ಸವಾಲಾಗಿದೆ. ಉದ್ದೇಶಿತ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ 715ಕ್ಕೂ ಅಧಿಕ ಬಸ್‌ಗಳು ನಗರದ ಬೇರೆ ಬೇರೆ ಕಡೆಗಳಿಂದ ಬಂದು ಸಿಲ್ಕ್ ಬೋರ್ಡ್ ಮತ್ತು ಕೆ.ಆರ್. ಪುರಕ್ಕೆ ಬಂದು ಸೇರುತ್ತವೆ. ಪೀಕ್ ಅವರ್‌ನಲ್ಲಿ ಹೆಚ್ಚು-ಕಡಿಮೆ ಒಟ್ಟಿಗೇ ಈ ಮಾರ್ಗ ಪ್ರವೇಶಿಸುತ್ತವೆ. ಅವುಗಳನ್ನು ಒಂದೇ ಪಥಕ್ಕೆ ತರಬೇಕಾಗಿದೆ.
ಇದಕ್ಕಾಗಿ ಎರಡೂ ತುದಿಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಲ್ಲಬೇಕಿದ್ದು, ಮತ್ತೂಂದು ರೀತಿಯ ದಟ್ಟಣೆಗೆ ಇದು ಕಾರಣವಾಗುವ ಸಾಧ್ಯತೆ ಇದೆ. “ಈ ಸಮಸ್ಯೆಯ ಅರಿವಿದ್ದು, ಚಾಲಕರಿಗೆ ಈಗಾಗಲೇ ಇದರ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಯಾರೂ ಒಮ್ಮೆಲೆ ನುಗ್ಗಬಾರದು. ಮಾರ್ಗದಲ್ಲೇ ಬಸ್‌ಗಳ ವೇಗವನ್ನು ನಿಯಂತ್ರಿಸುವ ಮೂಲಕ ಮುಂದಿನ ಬಸ್‌ಗೆ ದಾರಿ ಮಾಡಿಕೊಡಬೇಕು. ಪ್ರತಿ ಎರಡು ಬಸ್‌ಗಳ ನಡುವೆ ಕನಿಷ್ಠ 100-150 ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಹಾಗಾಗಿ, ಸಮಸ್ಯೆ ಆಗದು’ ಎಂದು ಶ್ರೀರಾಮ್ ಮುಲ್ಕವಾನ್ ಸ್ಪಷ್ಟಪಡಿಸಿದರು.
ನಿವಾಸಿಗಳ ಪ್ರತಿರೋಧ?: ಇದಲ್ಲದೆ, ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನ ಈ ಪಥದಿಂದಾಗಿ ಸುತ್ತಿಬಳಸಿ ಗೂಡು ಸೇರಬೇಕಾಗಿದೆ. ಈ ಹಿನ್ನೆಲೆಯಲ್ಲಿ ತುಸು ಪ್ರತಿರೋಧ ವ್ಯಕ್ತವಾಗಿದೆ. ಅವರ ಮನವೊಲಿಸುವ ಕೆಲಸ ಬಿಎಂಟಿಸಿ, ಬಿಬಿಎಂಪಿ, ಸಂಚಾರ ಪೊಲೀಸರಿಂದ ಆಗಬೇಕಿದೆ.
ಸಿಗ್ನಲ್‌ಗಳಲ್ಲೂ ಆದ್ಯತೆ?: ಬಿಪಿಎಲ್‌ನಲ್ಲಿ ಬರುವ ಟ್ರಾಫಿಕ್ ಸಿಗ್ನಲ್‌ಗಳಲ್ಲೂ ಬಸ್ ಸಂಚಾರಕ್ಕೆ ವಿಶೇಷ ಆದ್ಯತೆ ನೀಡಲು ಉದ್ದೇಶಿಸಲಾ ಗಿದೆ. ಹೌದು, ಸಾಮಾನ್ಯ ವಾಹನಗಳಿಗಿಂತ ಬಿಎಂಟಿಸಿ ಬಸ್‌ಗಳಿಗೆ ಈ ಮಾರ್ಗದಲ್ಲಿ ಹತ್ತು ಸಿಗ್ನಲ್‌ಗಳು ಬರುತ್ತವೆ. ಪ್ರಸ್ತುತ ಎಲ್ಲ ವಾಹನಗಳಿಗೂ ಒಂದೇ ಮಾದರಿ ಅನುಸರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಪಥದಲ್ಲಿ ಬರುವ ಬಸ್‌ಗಳಿಗೆ ತುಸು ಹೆಚ್ಚು ಸಮಯ ಮೀಸಲಿಡಲು ಚಿಂತನೆ ನಡೆದಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ. ಈ ಮೂಲಕ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲಾಗುತ್ತಿದ್ದು,
ಕಾರುಗಳಿಗಿಂತ ಬಸ್‌ಗಳು ವೇಗವಾಗಿ ಸಂಚರಿಸುತ್ತವೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದಾಗಿದೆ ಎಂದೂ ಅವರು ಹೇಳಿದರು. ಹೀಗೆ ಸಿಗ್ನಲ್‌ಗಳಲ್ಲಿ ಕೂಡ ಆದ್ಯತೆ ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಪ್ರತ್ಯೇಕ ಪಥ ನಿರ್ಮಿಸಲು ಸಾಧ್ಯವಿಲ್ಲದ ರಸ್ತೆಗಳಲ್ಲಿ ಆ್ಯಂಬುಲೆನ್ಸ್ ಮಾದರಿಯಲ್ಲಿ ಬಸ್‌ಗಳಿಗೆ ದಾರಿ ಬಿಡುವ ಪ್ರವೃತ್ತಿ ಬೆಳೆಯಬೇಕು. ಈ ಸಂಬಂಧ ನಿಯಮವನ್ನೂ ರೂಪಿಸಬೇಕು. ಆ ಮೂಲಕ ದಾರಿಬಿಡದವರಿಗೆ ದಂಡ ಹಾಕುವಂತಾಗಬೇಕು ಎಂದು ಸಾರಿಗೆ ತಜ್ಞರು ಪ್ರತಿಪಾದಿಸಿದರು.
ಚಾಲಕರು ಖುಷ್: ವಿಶೇಷ ಅಂದರೆ ಬಿಎಂಟಿಸಿ ಬಸ್ ಚಾಲಕರ ಮತ್ತು ನಿರ್ವಾಹಕ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಪ್ರತಿ ದಿನ ರಸ್ತೆ ಸಂಚಾರ ದಟ್ಟಣೆಯಲ್ಲಿ ಬಸ್ ನಡೆಸಿ ಸಾಕಾಗಿ ಹೋಗಿತ್ತು. ನಿಗದಿತ ಸಮಯಕ್ಕೆ ಸೇರಬೇಕಾದ ಸ್ಥಳ ಸೇರಲಾಗುತ್ತಿಲ್ಲ ಎಂಬ ಕೊರಗಿತ್ತು.ಆದರೆ ಪ್ರತ್ಯೇಕ ಬಸ್ ಪಥದಲ್ಲಿ ಸಾಗಿದಾಗ ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳ ತಲುಪಿದ್ದೇವೆ. ಈ ಯೋಜನೆ ಬೆಂಗಳೂರಿನ ಹಲವು ಕಡೆಗಳಲ್ಲಿ ಜಾರಿಗೆ ಬರಬೇಕು ಎಂದು ಬಿಎಂಟಿಸಿ ಬಸ್ ಚಾಲಕ ಶಿವಲಿಂಗಪ್ಪ ಹೇಳಿದರು.
ರಂಬೆ, ಕೊಂಬೆಗಳಿಗೆ ಕತ್ತರಿ: ಕೆಆರ್‌ಪುರಂನಿಂದ ಸಿಲ್ಕ್ ಬೋರ್ಡ್ ಸಿಗ್ನಲ್ ವರೆಗೆ ಸಾಗುವಾಗ ರಸ್ತೆ ಇಕ್ಕೆಲಗಳಲ್ಲಿ ಹಸಿರು ಗಿಡಗಳಿದ್ದು, ಅವುಗಳ ರಂಬೆ-ಕೊಂಬೆಗಳು ರಸ್ತೆಯತ್ತ ಮುಖ ಮಾಡಿವೆ. ಇದರಿಂದ ಬಸ್‌ಗಳ ಕನ್ನಡಿ, ಕಿಟಕಿ, ಗಾಜುಗಳಿಗೆ ಹಾನಿ ಉಂಟುಗುವುದಲ್ಲದೆ ಪ್ರಯಾ ಣಿಕರಿಗೂ ತೊಂದರೆ ಆಗಲಿದೆ. ಆ ಹಿನ್ನೆಲೆಯಲ್ಲಿ ದಾರಿಯ ಮಧ್ಯೆ ಅಲ್ಲಲ್ಲಿರುವ ಗಿಡಗಳ ರಂಬೆ ಕೊಂಬೆಗಳಿಗೆ ಕತ್ತರಿ ಹಾಕುವ ಕೆಲಸ ಕೂಡ ನಡೆದಿದೆ.
ಮಾರ್ಗದುದ್ದಕ್ಕೂ ಬೊಲಾರ್ಡ್‌ಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಸುಮಾರು 20 ಸಾವಿರ ಕೇವಲ ಕೆಆರ್‌ಪುರಂ – ಸಿಲ್ಕ್ ಬೋರ್ಡ್‌ಗಷ್ಟೇ ಈ ಯೋಜನೆ ಸೀಮಿತವಾಗ ಬಾರದು.ನಗರದ ಹಲವೆಡೆಗಳಲ್ಲಿ ಇದು ಜಾರಿಗೆ ಬರಬೇಕು. ಮನೋಜ್, ದೇವರ ಬಿಸನಹಳ್ಳಿ ನಿವಾಸಿಬೊಲಾರ್ಡ್‌ಗಳು ಬೇಕಾಗುತ್ತದೆ. ಆದರೆ, ಪೂರೈಕೆ ಕಂಪನಿ ಒಂದೇ ಇದೆ. ಕೊನೆಪಕ್ಷ ಒಂದು ಮಾರ್ಗದಲ್ಲಾದರೂ ನವೆಂಬರ್ 1ರೊಳಗೆ ಸೇವೆಗೆ ಮುಕ್ತಗೊಳಿಸುವ ಗುರಿ ಇದೆ.-ಬಿ.ಎಚ್. ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ ಕೆಲವು ಸಲ ಸಂಚಾರ ದಟ್ಟಣೆಯಿಂದ ವಿದ್ಯಾರ್ಥಿಗಳು ಸರಿಯಾದ ವೇಳೆಗೆ ಶಾಲೆ ಮತ್ತು ಮನೆ ತಲುಪಲು ಆಗುತ್ತಿಲ್ಲ. ಆ ದೃಷ್ಟಿಯಿಂದ ಪ್ರತ್ಯೇಕ ಬಸ್ ಪಥ ಜಾರಿ ಸಂತಸ ತಂದಿದೆ.
-ಚಿದಂಬರಂ, ಚೈತನ್ಯ ಶಾಲೆ ವಿದ್ಯಾರ್ಥಿ * ವಿಜಯಕುಮಾರ ಚಂದರಗಿ/ ದೇವೇಶ ಸೂರಗುಪ್ಪ