Advertisement

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

03:33 AM Jan 07, 2025 | Team Udayavani |

ಕೊಪ್ಪಳ: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಸತ್ಯಶೋಧನೆಗೆ ಆಗಮಿಸಿದ್ದ ಶಾಸಕ ಶೈಲೇಂದ್ರ ಹಾಗೂ ಮಂಜುಳಾ ನೇತೃತ್ವದ ತಂಡ, ಕುಕನೂರು ತಾಲೂಕಿನ ಆಡೂರು ಗ್ರಾಮ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರ ಸಾವಿನ ಕುರಿತು ವರದಿ ಪಡೆದು ಅಲ್ಲಿನ ಸೌಕರ್ಯಗಳ ಅವಲೋಕನ ಮಾಡಿತು.

Advertisement

ಸರ್ಕಾರದ ವಿರುದ್ಧವೂ ಟೀಕಾ ಪ್ರಹಾರ ನಡೆಸಿತು. ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌, ಶಾಸಕ ಶೈಲೇಂದ್ರ ಬೆಲ್ದಾಳೆ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಸೇರಿದಂತೆ ಇತರೆ ಮುಖಂಡರನ್ನು ಒಳಗೊಂಡ ಅಧ್ಯಯನ ತಂಡ ಬೆಳಗ್ಗೆ ಆಡೂರು ಗ್ರಾಮಕ್ಕೆ ಭೇಟಿ ನೀಡಿ ಈಚೆಗೆ ಮೃತಪಟ್ಟ ಬಾಣಂತಿ ಸಾವಿನ ಕುರಿತಂತೆ ಕುಟುಂಬದಿಂದ ಮಾಹಿತಿ ಪಡೆಯಿತು.

25 ಲಕ್ಷ ಪರಿಹಾರ, ನೌಕರಿ:
ಆಸ್ಪತ್ರೆಯಲ್ಲಿನ ಚಿಕಿತ್ಸಾ ವಿಧಾನದಲ್ಲಿನ ನಿರ್ಲಕ್ಷé, ದೂರದಿಂದ ಆಸ್ಪತ್ರೆಗೆ ಆಗಮಿಸಿದ ಕಾರಣ ವಿಳಂಬವಾಗಿದ್ದೂ ಸಾವಿಗೆ ಕಾರಣವಾದ ಕುರಿತು ಮೃತರ ಕುಟುಂಬಸ್ಥರು ತಂಡಕ್ಕೆ ಮಾಹಿತಿ ನೀಡಿದರು. ಮೃತ ಬಾಣಂತಿ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಡಿ ದರ್ಜೆ ನೌಕರಿ ಕೊಡಬೇಕು ಎಂದು ತಂಡದ ಮುಖಂಡರು ಒತ್ತಾಯಿಸಿದರು.

ಬಳಿಕ ಜಿಲ್ಲಾಸ್ಪತ್ರೆಗೆ ಆಗಮಿಸಿದ ತಂಡ, ನೇರವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಹೆರಿಗೆ ವ್ಯವಸ್ಥೆ ಕುರಿತು ವೈದ್ಯರಿಂದ ಮಾಹಿತಿ ಪಡೆಯಿತು. ಬಾಣಂತಿ ಸಾವಿನ ಕುರಿತು ಮಾಹಿತಿ ಪಡೆದ ತಂಡವು ಸಾವಿನಲ್ಲಿ ವೈದ್ಯರ ನಿರ್ಲಕ್ಷéದ ಕುರಿತು ಅಸಮಾಧಾನ ವ್ಯಕ್ತಪಡಿಸಿತು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶೈಲೇಂದ್ರ ಬೆಲ್ದಾಳೆ, ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳ ಹೆಚ್ಚಳಕ್ಕೆ ಆರೋಗ್ಯ ಇಲಾಖೆಯಲ್ಲಿನ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರವೇ ಮುಖ್ಯ ಕಾರಣ. ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಲ್ಲಿನ ರೇಣುಕಾ ಎನ್ನುವ ಬಾಣಂತಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ತಾಯಿ ಮತ್ತು ಮಗು ಇಬ್ಬರ ಜೀವವೂ ಉಳಿಯುತ್ತಿತ್ತು ಎಂದರು.

Advertisement

ರಾಜ್ಯಪಾಲರಿಗೆ ಅಧ್ಯಯನದ ವರದಿ:
ರಾಜ್ಯದಲ್ಲಿ ಬಿಜೆಪಿಯಿಂದ ವಿವಿಧ ತಂಡ ರಚಿಸಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿನ ಸಾವಿನ ಪ್ರಕರಣಗಳ ಕುರಿತು ಅಧ್ಯಯನ ನಡೆಸಿ ರಾಜ್ಯಾಧ್ಯಕ್ಷರಿಗೆ ನಮ್ಮ ಅಧ್ಯಯನದ ವರದಿ ಸಲ್ಲಿಸಲಿದ್ದೇವೆ. ನಂತರ ರಾಜ್ಯಪಾಲರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ಬಾಣಂತಿಯರ ಸಾವಿನ ಅಧ್ಯಯನದ ವರದಿ ಕೊಡಲಿದ್ದೇವೆ ಎಂದರು.

ಆರೋಗ್ಯ ಸಚಿವರ ವಿಪರೀತ ಭ್ರಷ್ಟತೆ
ಆರೋಗ್ಯ ಸಚಿವ ಗುಂಡೂರಾವ್‌ ಅವರ ಮಿತಿ ಮೀರಿದ ಭ್ರಷ್ಟತೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಎಲ್ಲವೂ ಹಾಳಾಗಿ ಹೋಗಿದೆ. ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯರಿಲ್ಲ, ಬೇಕಾದ ಸೌಕರ್ಯಗಳಿಲ್ಲ. – ಶೈಲೇಂದ್ರ ಬೆಲ್ದಾಳೆ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next