Advertisement

ಶವಪೆಟ್ಟಿಗೆ ತಯಾರಕರಿಗೆ ಬಿಡುವಿಲ್ಲದ ಕೆಲಸ

04:09 PM Apr 15, 2020 | sudhir |

ಪ್ಯಾರಿಸ್‌: ಸಾವು ಎನ್ನುವುದು ಜನರಿಗೆ ಕೆಟ್ಟ ಸುದ್ದಿಯಾದರೂ ಶವಪೆಟ್ಟಿಗೆ ತಯಾರಕರಿಗೆ ಮಾತ್ರ ಸಿಹಿ ಸುದ್ದಿ ಎಂಬ ನಾಣ್ಣುಡಿಯೊಂದು ಪಾಶ್ಚಾತ್ಯ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಸದ್ಯ ಕೋವಿಡ್‌ ಕಾಂಡ ಕೂಡ ಇದಕ್ಕೆ ಹೊರತಾಗಿಲ್ಲ.

Advertisement

ಕೋವಿಡ್‌ನಿಂದ ಜನರು ಸಾಯುತ್ತಿರುವಾಗ ಶವಪೆಟ್ಟಿಗೆ ತಯಾರಕರು ಬಿಡುವಿಲ್ಲದೆ ದುಡಿಯುತ್ತಿದ್ದಾರೆ.
ಯುರೋಪ್‌ನಲ್ಲೇ ಅತಿ ದೊಡ್ಡ ಶವಪೆಟ್ಟಿಗೆ ತಯಾರಾಕರಾದ ಫ್ರಾನ್ಸ್‌ನ ಪೂರ್ವದಲ್ಲಿರುವ ಒಜಿಎಫ್ನಲ್ಲಿ ಶವಪೆಟ್ಟಿಗೆಯ ತಯಾರಿ ಹಗಲಿರುಳು ನಡೆಯುತ್ತಿದೆ.

ಬೇಡಿಕೆ ಅಪಾರವಾಗಿರುವುದರಿಂದ ವಿವಿಧ ವಿನ್ಯಾಸಗಳ ಶವಪೆಟ್ಟಿಗೆಯನ್ನು ತಯಾರಿಸುವಷ್ಟು ಪುರುಸೊತ್ತಿಲ್ಲ. ಹೀಗಾಗಿ ಹೆಚ್ಚು ಜನಪ್ರಿಯವಾದ 4 ವಿನ್ಯಾಸಗಳಲ್ಲಷ್ಟೇ ಶವಪೆಟ್ಟಿಗೆಗಳು ತಯಾರಾಗುತ್ತಿವೆ. ಸಾಮಾನ್ಯವಾಗಿ ಇಲ್ಲಿ 15 ಮಾದರಿಯಲ್ಲಿ ಲಭ್ಯವಿರುತ್ತಿತ್ತು.

ಇಲ್ಲಿ ನಿತ್ಯ ಸರಾಸರಿಯಾಗಿ 410 ಶವಪೆಟ್ಟಿಗೆಗಳು ತಯಾರಾಗುತ್ತಿವೆ. ಇದೇ ಕೋವಿಡ್‌ ರುದ್ರ ತಾಂಡವದ ಬಿರುಸನ್ನು ಸೂಚಿಸಬಲ್ಲದು.

ಇದು ಶವಪೆಟ್ಟಿಗೆ ತಯಾರಕರಿಗೆ ಸವಾಲಾಗಿರುವ ಸಮಯ. ಜನರ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಕಾರ್ಮಿಕರು ರಜೆಯಿಲ್ಲದೆ, ಓವರ್‌ಟೈಮ್‌ ಮಾಡಿ ದುಡಿಯುತ್ತಿದ್ದಾರೆ ಎನ್ನುತ್ತಾರೆ ಫ್ಯಾಕ್ಟರಿಯ ನಿರ್ದೇಶಕ ಇಮಾನ್ಯುಯೆಲ್‌ ಗ್ಯಾರೆಟ್‌.

Advertisement

ಕೋವಿಡ್‌ ವೈರಸ್‌ ಹಾವಳಿ ಅಧಿಕವಾದ ದೇಶಗಳಲ್ಲಿ ಫ್ರಾನ್ಸ್‌ ಕೂಡ ಸೇರಿದೆ. ಶವಪೆಟ್ಟಿಗೆ ತಯಾರಿ ಎನ್ನುವುದು ಒಂದು ರೀತಿಯಲ್ಲಿ ಯಾತನಾಮಯವಾದ ಕೆಲಸ. ಆದರೆ ನಾವಿದನ್ನು ದೇಶ ಸೇವೆ ಎಂದು ಭಾವಿಸಿದ್ದೇವೆ ಎನ್ನುತ್ತಾರೆ ಕಾರ್ಯ ತಂಡದ ಮುಖ್ಯಸ್ಥ ಡಿಡಿಯರ್‌ ಪಿಡನ್ಸೆಂಟ್‌.

1910ರಲ್ಲಿ ಸ್ಥಾಪನೆಯಾದ ಈ ಶವಪೆಟ್ಟಿಗೆ ಫ್ಯಾಕ್ಟರಿ ಮರ ಮತ್ತು ಚಾರೊRàಲ್‌ ಶವಪೆಟ್ಟಿಗೆ ತಯಾರಿಗೆ ಹೆಸರುವಾಸಿ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಕಂಪೆನಿ ಶವಪೆಟ್ಟಿಗೆ ತಯಾರಿಯಲ್ಲಿ ವಿಶೇಷ ಪರಿಣತಿ ಸಾಧಿಸಿತ್ತು.

10 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿದೆ ಒಜಿಎಫ್ ಸ್ಥಾವರ. ಆದರೆ ಹಾಗೆಂದು ಗರಿಷ್ಠ ಸಂಖ್ಯೆಯಲ್ಲಿ ಶವಪೆಟ್ಟಿಗೆ ತಯಾರಿಸಿದ ಅನುಭವ ಇದೇ ಮೊದಲಲ್ಲ. 2003ರಲ್ಲಿ ಉಷ್ಣಮಾರುತ ಹಾವಳಿಯಿಟ್ಟಾಗ ನಿತ್ಯ ಸರಾಸರಿ 500 ರಂತೆ ಶವಪೆಟ್ಟಿಗೆಗಳನ್ನು ತಯಾರಿಸಲಾಗಿತ್ತಂತೆ. ಉಷ್ಣ ಮಾರುತಕ್ಕೆ ಫ್ರಾನ್ಸ್‌ನಲ್ಲಿ 15,000 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಈಗಿನ ಪರಿಸ್ಥಿತಿ ಮಾತ್ರ ತುಸು ಭಿನ್ನ. ಈಗ ಕಾರ್ಮಿಕರೂ ಮಾಸ್ಕ್, ಗ್ಲೌಸ್‌ ಹಾಕಿಕೊಂಡು ತಮ್ಮನ್ನು ರಕ್ಷಿಸಿಕೊಳ್ಳಬೇಕಿದೆ. ಕೋವಿಡ್‌ ಈ ಶವಪೆಟ್ಟಿಗೆ ಫ್ಯಾಕ್ಟರಿಯನ್ನೂ ಬಿಟ್ಟಿಲ್ಲ. ಮೂವರಿಗೆ ಸೋಂಕು ತಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next