ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತೆಂಕಿಲದಲ್ಲಿ ಗುಡ್ಡಕುಸಿದು ಹೆದ್ದಾರಿ ಸಂಚಾರ ಬಂದ್ ಆಗಿದ್ದು ಪರ್ಯಾಯ ರಸ್ತೆಯನ್ನು ಬಳಸಲಾಗಿದೆ. ಆ. 2ರಂದು ನಸುಕಿನ ಜಾವ ಗುಡ್ಡ ಕುಸಿದಿದೆ. ಕೆಲವು ದಿನಗಳ ಹಿಂದೆಯೂ ಇಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಶುಕ್ರವಾರ ಕುಸಿತಗೊಂಡ ಸ್ಥಳದ ಆಸುಪಾಸಿನಲ್ಲಿ ಮತ್ತೆ ಕುಸಿಯುವ ಸಾಧ್ಯತೆ ಕಂಡು ಬಂದಿದೆ.
ರಸ್ತೆ ಬಂದ್ ಮಾಡಿ ಮಣ್ಣು ತೆರವು ಮೂರು ಜೆಸಿಬಿಗಳ ಮೂಲಕ ಬೆಳಗ್ಗಿನಿಂದ ಕಾರ್ಯಾಚರಣೆ ನಡೆಸಲಾಯಿತು. ಅಪರಾಹ್ನದ ವೇಳೆಗೆ ಮಣ್ಣು ತೆರವು ಪೂರ್ಣಗೊಂಡಿದ್ದು ಟ್ಯಾಂಕರ್ ಮೂಲಕ ನೀರು ಹರಿಸಿ ಕೆಸರನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಎರಡು ಭಾಗಗಳಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಪೇಟೆ ಮೂಲಕ ಸಂಚಾರ ಹೆದ್ದಾರಿ ಬಂದ್ ಆದ ಕಾರಣ ಪರ್ಯಾಯವಾಗಿ ನಗರದ ರಸ್ತೆಗಳ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಂಗಳೂರು ಭಾಗದಿಂದ ಬಂದ ವಾಹನಗಳು ಬೊಳುವಾರು, ಜೈನರಭವನದ ರಸ್ತೆ ಮೂಲಕ ಪತ್ರಾವೋ ಸರ್ಕಲ್‌ನಲ್ಲಿ ಹೆದ್ದಾರಿಯನ್ನು ಸೇರಿತು. ಸುಳ್ಯ ಭಾಗದಿಂದ ಬಂದ ವಾಹನಗಳು ಕೂಡ ಅದೇ ರಸ್ತೆಯ ಮೂಲಕ ತೆರಳಿತ್ತು.
ಎಸಿ ಭೇಟಿ
ತೆಂಕಿಲ ಬಳಿ ಗುಡ್ಡ ಕುಸಿತ ಪ್ರದೇಶಕ್ಕೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ
ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ನಗರಸಭೆ ಸದಸ್ಯ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎಸ್ ಮನೋಹರ್ ಉಪಸ್ಥಿತರಿದ್ದರು.
ಎಸಿ ಹೇಳಿದ್ದೇನು?
ಹವಾಮಾನ ಇಲಾಖೆ ಮಾಹಿತಿಯಂತೆ ಗಾಳಿ ಮಳೆ ಇದ್ದು ಜನರು ಮನೆಯೊಳಗೆ ಇರುವಂತೆ ಮನವಿ
ಅಪಾಯಕಾರಿ ಮನೆಗಳಿದ್ದರೆ ನಗರಸಭೆ, ಗ್ರಾ.ಪಂ ಕಡೆಯಿಂದ ನೋಟಿಸ್ ನೀಡಿದಾಗ ಅಪಾಯಕಾರಿ ಮನೆಗಳನ್ನು ಬಿಟ್ಟು ಇಲಾಖೆಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಬೇಕು.
ಪ್ರಾಕೃತಿಕ ವಿಕೋಪದ ನೀತಿ ನಿಯಮಗಳ ಅನುಸಾರ ನಷ್ಟ ಪರಿಹಾರಕ್ಕೆ ಕ್ರಮ