Advertisement

ಓವರ್‌ಹೆಡ್‌ ಟ್ಯಾಂಕ್‌ ಶಿಥಿಲ: ಸ್ಥಳೀಯರಲ್ಲಿ ಆತಂಕ!

11:16 AM Sep 13, 2019 | Team Udayavani |

ಹಾವೇರಿ: ನಗರದ ದೇಸಾಯಿಗಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ ಸಂಪೂರ್ಣ ಶಿಥಿಲಗೊಂಡಿದ್ದು, ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ನಿತ್ಯ ಭೀತಿಯಲ್ಲೇ ದಿನಕಳೆಯುವಂತಾಗಿದೆ.

Advertisement

ದೇಸಾಯಿಗಲ್ಲಿ ರಾಮದೇವರ ಗುಡಿ ಸಮೀಪದಲ್ಲಿರುವ ಈ ಟ್ಯಾಂಕ್‌ ಯಾವಾಗ ಕುಸಿದು ಬೀಳುತ್ತೋ ಎಂಬ ದುಸ್ಥಿತಿ ತಲುಪಿದ್ದು, ಜವಾಬ್ದಾರಿ ಸ್ಥಾನದಲ್ಲಿರುವವರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅನಾಹುತ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜನರು ಹಲವು ಬಾರಿ ಆಗ್ರಹಿಸಿದರೂ ಯಾವುದೇ ಸ್ಪಂದನೆ ದೊರಕದೆ ಇರುವುದು ಸ್ಥಳೀಯರ ಆಕ್ರೋಶ ಹೆಚ್ಚಿಸಿದೆ.

ಅಂದಾಜು 10 ಸಾವಿರ ಲೀಟರ್‌ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಈ ಟ್ಯಾಂಕ್‌, ಈಗ ಸುತ್ತಮುತ್ತಲಿನ ನಿವಾಸಿಗಳಿಗೆ ತಲೆನೋವಾಗಿದೆ.

ಟ್ಯಾಂಕ್‌ಗೆ ನೀರು ಬಿಟ್ಟ ತಕ್ಷಣ ಅಲ್ಲಲ್ಲಿ ಒಡೆದು ಬಿರುಕಿನ ಜಾಗಗಳಿಂದ ನೀರು ಸೋರುತ್ತದೆ. ಶಿಥಿಲಗೊಂಡಿರುವ ಟ್ಯಾಂಕ್‌ನಿಂದ ಸಿಮೆಂಟ್ ಚೂರುಗಳು, ಸಣ್ಣ ಕಲ್ಲುಗಳು ಆಗಾಗ ಬೀಳುತ್ತಿರುವೆ. ಟ್ಯಾಂಕ್‌ ರಸ್ತೆ ಮಧ್ಯದಲ್ಲಿಯೇ ಇದ್ದು ಮಕ್ಕಳು, ಮಹಿಳೆಯರು ಸೇರಿದಂತೆ ಈ ದಾರಿಯಲ್ಲಿ ಓಡಾಡುವ ಜನತೆ ಚಿಂತೆಗೀಡಾಗಿದ್ದಾರೆ.

ಬೀಳುವ ಸಿಮೆಂಟ್ ಚೂರು: ಸುಮಾರು 20ವರ್ಷಗಳ ಹಿಂದೆ ಈ ಓವರ್‌ ಹೆಡ್‌ ಟ್ಯಾಂಕ್‌ನ್ನು ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಟ್ಯಾಂಕ್‌ಗೆ ಆಧಾರವಾಗಿ ನಿಲ್ಲಿಸಿರುವ ಕಂಬಗಳು ಶಿಥಿಲಗೊಂಡಿವೆ. ಟ್ಯಾಂಕ್‌ ಕೂಡ ಸಂಪೂರ್ಣ ಶಿಥಿಲಗೊಂಡಿದ್ದು, ಸುತ್ತಲೂ ನೀರು ಸೋರಿಕೆಯಾಗುತ್ತದೆ. ಟ್ಯಾಂಕ್‌ ತಳದಲ್ಲೇ ಕೆಲ ಮನೆಗಳಿದ್ದು, ಆ ಮನೆಗಳ ಮೇಲೆ ಸಿಮೆಂಟ್ ಚೂರುಗಳು ಬೀಳುತ್ತಲೇ ಇರುತ್ತವೆ. ಕೆಲವರ ತಲೆ ಮೇಲೂ ಟ್ಯಾಂಕ್‌ನಿಂದ ದೊಡ್ಡ ಗಾತ್ರದ ಸಿಮೆಂಟ್ ಚೂರುಗಳು ಬಿದ್ದು ಗಾಯಗೊಂಡಿರುವ ಉದಾಹರಣೆಗಳೂ ಇವೆ.

Advertisement

ಸುಮಾರು ಆರೇಳು ವರ್ಷಗಳ ಹಿಂದೆಯೇ ಟ್ಯಾಂಕ್‌ ಶಿಥಿಲಗೊಂಡಿದ್ದು, ಅನೇಕ ಬಾರಿ ಈ ಟ್ಯಾಂಕ್‌ ನೆಲಸಮಗೊಳಿಸಿ, ಹೊಸ ಟ್ಯಾಂಕ್‌ ಕಟ್ಟುವ ಬಗ್ಗೆ ನಗರಸಭೆಯಲ್ಲಿ ಚರ್ಚೆ, ಠರಾವು ಎಲ್ಲವೂ ಆಗಿದೆ. ಆದರೆ, ವಾಸ್ತವದಲ್ಲಿ ಕೆಲಸ ಮಾತ್ರ ಆಗಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಟ್ಯಾಂಕ್‌ನಿಂದ ನೀರು ಸೋರಿಕೆ ಪ್ರಮಾಣ ಹೆಚ್ಚಾಗಿದೆ. ಆದರೂ ಇದೇ ಶಿಥಿಲಗೊಂಡ ಟ್ಯಾಂಕ್‌ಗೆ ನೀರು ತುಂಬಿಸಿ 21, 22, 29, 30, 31 ಸೇರಿದಂತೆ ಐದಾರು ವಾರ್ಡ್‌ಗಳಿಗೆ ನಗರಸಭೆ ನೀರು ಸರಬರಾಜು ಮಾಡುತ್ತಿದೆ. ಟ್ಯಾಂಕ್‌ಗೆ ನೀರು ಬಿಟ್ಟಾಗಲೆಲ್ಲ ಸ್ಥಳೀಯರು ನಿದ್ದೆಗೆಡುವಂತಾಗಿದೆ. ಟ್ಯಾಂಕ್‌ಗೆ ನೀರು ತುಂಬಿಸಿದಾಗ ಅರ್ಧ ನೀರು ಸೋರಿಕೆಯಾಗಿ ಚರಂಡಿ ಪಾಲುಗುತ್ತಿವೆ.

ನೀರು ವ್ಯರ್ಥವಾಗುವುದಕ್ಕಿಂತ ಟ್ಯಾಂಕ್‌ ಯಾವಾಗ ಬಿದ್ದು ಅನಾಹುತ ಸಂಭವಿಸುತ್ತದೆಯೋ ಎಂಬ ಭಯ ಸುತ್ತಲಿನ ನಾಗರಿಕರನ್ನು ಹೆಚ್ಚು ಕಾಡುತ್ತಿದ್ದು ಈಗಲಾದರೂ ನಗರಸಭೆ ಎಚ್ಚೆತ್ತು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ.

ದೇಸಾಯಿ ಗಲ್ಲಿಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ಶಿಥಿಲಗೊಂಡಿರುವ ಬಗ್ಗೆ ನೀರು ಸರಬರಾಜು ಮಂಡಳಿ ತಾಂತ್ರಿಕ ಅಧಿಕಾರಿಗಳಿಂದ ವರದಿ ಪಡೆದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು.• ಬಸವರಾಜ ಜಿದ್ದಿ,ಪೌರಾಯುಕ್ತರು, ನಗರಸಭೆ

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next