ರಾಯಚೂರು: ಶುಲ್ಕ ಪಾವತಿ ಮಾಡಲು ಯಾವುದೇ ಒತ್ತಡ ಹಾಕಬಾರದು ಎಂದು ಸರ್ಕಾರದ ಆದೇಶ ಇದ್ದಾಗ್ಯೂ ನಗರದ ಕೆಲ ಖಾಸಗಿ ಶಾಲಾಡಳಿತ ಮಂಡಳಿಯವರು ಅಧಿಕ ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಾಯಿಸುತ್ತಿದ್ದು, ಅಂಥ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಸಮಾಜವಾದಿ ಪಕ್ಷದ ಸದಸ್ಯರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಖಾತೆ ಸಚಿವರಿಗೆ ಮನವಿ ಸಲ್ಲಿಸಿ, ಕೋವಿಡ್ ಕಾರಣದಿಂದ ಸರ್ಕಾರ ಶೇ.30ರಷ್ಟು ಶುಲ್ಕ ಕಡಿತಗೊಳಿಸಿದೆ. ಪೋಷಕರಿಗೆ ಹಂತ-ಹಂತವಾಗಿ ಪಾವತಿಸಲು ಅವಕಾಶ ನೀಡಬಹುದು ಎಂದು ಶಿಕ್ಷಣ ಇಲಾಖೆ ಆಯುಕ್ತರು ಆದೇಶದ ಹೊರಡಿಸಿದ್ದಾರೆ. ಆದರೆ, ಶಾಲಾಡಳಿತ ಮಂಡಳಿಯವರು ಕೆಲ ಪೋಷಕರಿಗೆ ಖಾಲಿ ಚೆಕ್‌ಗಳ ಮೇಲೆ ಸಹಿ ಮಾಡಿ ನೀಡುವಂತೆಯೂ ಒತ್ತಾಯಿಸುತ್ತಿದ್ದಾರೆ.
ಶುಲ್ಕ ಪಾವತಿಸದಿದ್ದಲ್ಲಿ ಮಕ್ಕಳನ್ನು ಪರೀಕ್ಷೆ ಬರೆಯಲು ಅನುವು ಮಾಡಿಕೊಡುವುದಿಲ್ಲ ಎಂದು ಬೆದರಿ ಸುತ್ತಿದ್ದಾರೆ. ಕೆಲವೆಡೆ ಪರೀಕ್ಷೆಯಿಂದ ಹೊರಗೆ ಕಳುಹಿಸಲಾಗಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನ ಯಾತನೆ ಅನುಭವಿಸುವಂತಾಗಿದೆ ಎಂದು ದೂರಿದರು.
ಕೂಡಲೇ ಯಾವುದೇ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಒತ್ತಡ ಹಾಕಬಾರದು. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು. ಕಿರುಕುಳ ನೀಡಿದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಿಭಾಗೀಯ ಅಧ್ಯಕ್ಷ ಎಕ್ಬಾಲ್ ಅಹ್ಮದ್, ಸದಸ್ಯರಾದ ಸಂಗಮೇಶ, ನರೇಂದ್ರ, ಅಮರೇಶ, ಪರಶುರಾಮ, ಎಂ.ಡಿ.ತಲ್ಲಾ ಇತರರಿದ್ದರು.