ಬೆಂಗಳೂರು: ಕಾಟೇರ ಸಿನಿಮಾ ಸಕ್ಸಸ್ ಸಂಭ್ರಮಿಸಲು ಯಶವಂತಪುರದ ಒರಾಯನ್ ಮಾಲ್ ಮುಂಭಾಗದಲ್ಲಿರುವ ಜೆಟ್‌ಲ್ಯಾಗ್ ಪಬ್‌ನಲ್ಲಿ ಮುಂಜಾನೆವರೆಗೆ ಪಾರ್ಟಿ ನಡೆಸಿದ ಆರೋಪದಡಿ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿ ಎಂಟು ನಟರಿಗೆ ಸುಬ್ರಹ್ಮಣ್ಯನಗರ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್, ನಟ ನಿನಾಸಂ ಸತೀಶ್, ಡಾಲಿ ಧನಂಜಯ್, ಚಿಕ್ಕಣ್ಣ, ಅಭಿಷೇಕ್ ಅಂಬರೀಷ್‌ಗೆ ನೋಟಿಸ್ ನೀಡಿದ್ದು, ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಜ.3ರಂದು ಸಿನಿಮಾ ಸಕ್ಸಸ್ ಸಂಭ್ರಮಿ ಸಲು ನಿರ್ಮಾಪಕಿ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಜಗದೀಶ್ ಮಾಲೀಕತ್ವದ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆದರೆ, ತಡರಾತ್ರಿ 1ಗಂಟೆವರೆಗೂ ಮಾತ್ರ ಪಾರ್ಟಿ ನಡೆಸಬೇಕು ಎಂದು ಸರ್ಕಾರ ಆದೇಶಿ ಸಿತ್ತು. ಆದರೆ, ಡಿ.4ರ ನಸುಕಿನ 3.30ರವರೆಗೆ ಎಲ್ಲ ಸ್ಟಾರ್ ನಟರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅದಕ್ಕೆ ಪಬ್‌ನ ಮಾಲೀಕರು ನಟರಿಗೆ ಮದ್ಯ, ಊಟದ ವ್ಯವಸ್ಥೆ ಕಲ್ಪಿಸಿದ್ದರು.
ಅದಕ್ಕೂ ಮೊದಲು ತಡರಾತ್ರಿ 12.45ರ ಸುಮಾರಿಗೆ ಗಸ್ತು ಪೊಲೀಸರು 1 ಗಂಟೆಗೆ ಪಬ್ ಮುಚ್ಚುವಂತೆ ಸೂಚಿಸಿದ್ದರು. ಆದರೂ ಮರುದಿನ ನಸುಕಿನ 3.30ವರೆಗೂ ಪಬ್‌ನಲ್ಲಿ ಸೇವೆ ಒದಗಿಸಿದ್ದಾರೆ. ಹೀಗಾಗಿ ಪಬ್ ಮಾಲೀಕ ಶಶಿರೇಖಾ ಜಗದೀಶ್ ಹಾಗೂ ಮ್ಯಾನೇಜರ್ ಪ್ರಶಾಂತ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ವೇಳೆ ಮ್ಯಾನೇಜರ್, ಪಬ್‌ನ ಸಿಬ್ಬಂದಿ ವಿಚಾರಣೆ ಹಾಗೂ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ನಟ ದರ್ಶನ್ ಸೇರಿ ಎಂಟು ಮಂದಿ ಸ್ಟಾರ್‌ಗಳು ಪಾರ್ಟಿಯಲ್ಲಿ ಪಾಲ್ಗೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಖುದ್ದು ನಟರ ಮನೆಗಳಿಗೆ ನೋಟಿಸ್ ತಲುಪಿಸಿದ್ದಾರೆ. ಜತೆಗೆ ವಾಟ್ಸ್‌ಆಪ್ ಮೂಲಕವೂ ನೋಟಿಸ್ ಕಳುಹಿಸಲಾಗಿದೆ. ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗಿ ಉತ್ತರ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವಿದೇಶಕ್ಕೆ ತೆರಳಿದ ನಟ ದರ್ಶನ್:
ಕಾಟೇರ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ನಟ ದರ್ಶನ್ ತಮ್ಮ ಸ್ನೇಹಿತರ ಜತೆ ದುಬೈಗೆ ತೆರಳಿದ್ದಾರೆ. ಮತ್ತೂಂದೆಡೆ ಜ.8ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾಗುವಂತೆ ದರ್ಶನ್‌ಗೆ ನೋಟಿಸ್ ನೀಡಲಾಗಿತ್ತು. ಆದರೆ, ಜ.4ರಂದೇ ದರ್ಶನ್ ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಅವರ ಮನೆಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
ಪಬ್‌ನ ಮಾಲೀಕರು, ಮ್ಯಾನೇಜರ್, ಸಿಬ್ಬಂದಿ ವಿಚಾರಣೆಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸಿನಿಮಾ ನಟರು ಸೇರಿ ಎಂಟು ಮಂದಿಗೆ ನೋಟಿಸ್ ನೀಡಲಾಗಿದ್ದು, ಕೆಲ ಸ್ಟಾರ್‌ಗಳು ವಿದೇಶದಲ್ಲಿದ್ದಾರೆ ಎಂಬ ಮಾಹಿತಿಯಿದೆ. ತನಿಖೆ ಮುಂದುವರಿದಿದೆ
-ಸೈದುಲು ಅಡಾವತ್, ಉತ್ತರ ವಿಭಾಗ ಡಿಸಿಪಿ