ವಾಡಿ: ಗ್ರಾಪಂ ಹಾಗೂ ಮಂಡಲ ಪಂಚಾಯತಿ ಆಡಳಿತ ಹೊಂದಿದ್ದ ಸಿಮೆಂಟ್ ನಗರಿಯಲ್ಲಿ ಪುರಸಭೆ ಆಡಳಿತ ಜಾರಿಯಾಗಿ ಎರಡು ದಶಕ ಕಳೆದ ನಂತರ ಎರಡು ಮೂತ್ರಾಲಯಗಳ ಸೌಲಭ್ಯ ಒದಗಿಸಲಾಗಿದೆ.
ಕೇಂದ್ರ ಬಿಜೆಪಿ ಸರಕಾರದಿಂದ ಸ್ವತ್ಛ ಭಾರತ ಅಭಿಯಾನ ಯೋಜನೆ ಜಾರಿಯಾದ ನಂತರ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಆಡಳಿತ ವರ್ಗ ಆದ್ಯತೆ ನೀಡಿತ್ತು. ಆದರೆ ಸಾರ್ವಜನಿಕ ಮೂತ್ರಾಲಯ, ಶೌಚಾಲಯಗಳ ಅಗತ್ಯತೆ ಅರಿತಿರಿಲಿಲ್ಲ. ಪಟ್ಟಣದ ಹಲವು ಬಡಾವಣೆಗಳಲ್ಲಿ ನಿರ್ಮಿಸಲಾಗಿದ್ದ ಸಾರ್ವಜನಿಕ ಶೌಚಾಲಯಗಳು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದವು. ಪುರುಷರು ಬಯಲು ಶೌಚಕ್ಕೆ ಮೊರೆ ಹೋಗಿದ್ದರು.
ಸಾರ್ವಜನಿಕರ ಒತ್ತಾಯ, ವಿವಿಧ ಸಂಘ ಸಂಸ್ಥೆಗಳ ಹೋರಾಟದ ಫಲವಾಗಿ ಮೂತ್ರಾಲಯಗಳ ನಿರ್ಮಾಣಕ್ಕೆ ಆದೇಶ ನೀಡಿರುವ ಕ್ಷೇತ್ರದ ಶಾಸಕ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಇಚ್ಛಾಶಕ್ತಿಯಿಂದ ಎರಡು ಸಾರ್ವಜನಿಕ ಮೂತ್ರಾಲಯಗಳು ಮಂಜೂರಾಗಿವೆ. ಪೊಲೀಸ್ ಠಾಣೆ ಸಮೀಪದ ಬಸವೇಶ್ವರ ಚೌಕ್, ಶ್ರೀನಿವಾಸ ಗುಡಿ ವೃತ್ತದಲ್ಲಿ ತಲಾ 2.10 ಲಕ್ಷ ರೂ. ಅನುದಾನದಡಿ ಮೂತ್ರಾಲಯ ನಿರ್ಮಿಸಿ, ಸಾರ್ವಜನಿಕ ಬಳಕೆಗೆ ತೆರೆದಿಡಲಾಗಿದೆ. ಮೌಲಾನಾ ಅಬುಲ್ ಕಲಾಂ ಆಜಾದ್ ವೃತ್ತದಲ್ಲಿ ಮೂತ್ರಾಲಯ ನಿರ್ಮಿಸಲು ಮುಂದಾಗಿ ಜನರ ವಿರೋಧ ಎದುರಿಸಿ ಬೇಸರ ವ್ಯಕ್ತಪಡಿಸಿದ ಮುಖ್ಯಾಧಿಕಾರಿ ವಿಟ್ಠಲ ಹಾದಿಮನಿ, ಇತರ ವೃತ್ತಗಳಲ್ಲಿ ಜಾಗದ ಕೊರತೆ ಎದುರಿಸಿದ್ದಾರೆ.
ಮಾರುಕಟ್ಟೆ, ಅಂಬೇಡ್ಕರ್ ವೃತ್ತ, ಆಜಾದ್ ವೃತ್ತ, ಚೌಡೇಶ್ವರ ಚೌಕ್, ಬಳಿರಾಮ ಚೌಕ್‌ಗಳಲ್ಲಿ ಜಾಗ ಇಲ್ಲದ ಕಾರಣ ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಹಕಾರ ದೊರೆಯದ ಕಾರಣ ಉಳಿದ ಮೂತ್ರಾಲಯಗಳ ಅನುದಾನ ವಾಪಸ್ ಹೋಗುತ್ತಿದೆ ಎಂದು ಪುರಸಭೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣಕ್ಕೆ ಮೂತ್ರಾಲಯಗಳು ಬೇಕು ಎನ್ನುವ ಬೇಡಿಕೆಯಿಟ್ಟು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ನಾಗರಿಕರನ್ನು ಸಂಘಟಿಸಿ ಹೋರಾಟ ಮಾಡಲಾಗಿತ್ತು. ಕೊನೆಗೂ ಪುರಸಭೆ ಆಡಳಿತ ಜನರ ಬೇಡಿಕೆಗೆ ಸ್ಪಂದಿಸಿದೆ. ಅವುಗಳಿಂದ ದುರ್ವಾಸನೆ ಹರಡದಂತೆ ಸ್ವತ್ಛತೆ ಕಾಪಾಡಬೇಕು ಎಂದು ಎಐಡಿವೈಒ ಮುಖಂಡ ರಾಜು ಒಡೆಯರಾಜ ಮನವಿ ಮಾಡಿದ್ದಾರೆ.