ಬೆಂಗಳೂರು: ಸಾರ್ವಜನಿಕರು ಬಯಸುವ ಸೇವೆಗಳನ್ನು ಕಾಲಮಿತಿಯೊಳಗೆ ಪಡೆಯಲು ಅನುಕೂಲವಾಗುವಂತೆ “ಸಕಾಲ’ ಯೋಜನೆ ಜಾರಿಯಾಗಿದೆ. ಆದರೆ ರಾಜಧಾನಿಯ ಸರ್ಕಾರಿ ಕಚೇರಿಗಳಲ್ಲಿ “ಸಕಾಲ’ದಡಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ನಿಗದಿತ ಕಾಲಮಿತಿ ಮುಗಿದರೂ 10,000ಕ್ಕೂ ಹೆಚ್ಚು ಅರ್ಜಿ ವಿಲೇವಾರಿಯಾಗದೆ ಬಾಕಿ ಉಳಿದಿವೆ!
ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಸಕಾಲದಡಿ ಸಲ್ಲಿಕೆಯಾದ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಕಾಲಮಿತಿಯೊಳಗೆ ಸೇವೆ ಕಲ್ಪಿಸದಿದ್ದರೆ ದಿನಕ್ಕೆ ಇಂತಿಷ್ಟು ದಂಡ ವಿಧಿಸಲು ಅವಕಾಶವಿದೆ. ದಂಡ ವಿಧಿಸುವ ಪ್ರಕ್ರಿಯೆಯೂ ನಡೆಯದ ಕಾರಣ ಸಕಾಲದ ಮೂಲ ಆಶಯವೇ ಈಡೇರದಂತಾಗಿದೆ.
ಸಕಾಲ ಆಡಳಿತಾಧಿಕಾರಿ ಕೆ.ಮಥಾಯಿ ಅವರು ಇತ್ತೀಚೆಗೆ ಬಿಡಿಎ ಕಚೇರಿ, ನಗರ ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ಉತ್ತರ ಹಾಗೂ ದಕ್ಷಿಣ ತಾಲ್ಲೂಕು ತಹಸೀಲ್ದಾರ್ ಕಚೇರಿ, ರಾಜಾನುಕುಂಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಕಾಲದಡಿ ಅರ್ಜಿ ವಿಲೇವಾರಿ ಪ್ರಕ್ರಿಯೆ ಪರಿಶೀಲಿಸಿದರು. ಬಹಳಷ್ಟು ಕಚೇರಿಗಳಲ್ಲಿ ನಿಗದಿತ ಕಾಲಮಿತಿ ಮುಗಿದರೂ ಅರ್ಜಿ ಬಾಕಿ ಉಳಿದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಸಾಕಷ್ಟು ಮಹತ್ವದ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗಿದೆ. ಪ್ರತಿ ಸೇವೆಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಇತ್ಯರ್ಥಪಡಿಸಿ ಸೇವೆ ಒದಗಿಸಬೇಕು ಎಂಬ ನಿಯಮವಿದೆ. ಹಾಗಿದ್ದರೂ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 10,000ಕ್ಕೂ ಹೆಚ್ಚು ಅರ್ಜಿಗಳು ಅವಧಿ ಮೀರಿದರೂ ವಿಲೇವಾರಿಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಆಡಳಿತಾಧಿಕಾರಿ ಕೆ.ಮಥಾಯಿ ತಿಳಿಸಿದರು.
ಅರ್ಜಿ ವಿಲೇವಾರಿ ವಿಳಂಬ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗೆ ದಂಡ ವಿಧಿಸಿ ಅದನ್ನು ಅರ್ಜಿದಾರರಿಗೆ ನೀಡಲು ಅವಕಾಶವಿದೆ. ಆದರೆ ಈ ಬಗ್ಗೆ ಬಹುಪಾಲು ಅರ್ಜಿದಾರರಿಗೆ ಮಾಹಿತಿ ಇದ್ದಂತಿಲ್ಲ. ಹಾಗಾಗಿ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆದ ಮಾಹಿತಿ ಇಲ್ಲ. ಈ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.