ನವದೆಹಲಿ: ಸಾವಿರಾರು ಕೋಟಿ ರೂಪಾಯಿ ಸಾಲ ಬ್ಯಾಂಕ್ ನಿಂದ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ಆಭರಣ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ ಸುಮಾರು 50 ಉದ್ಯಮಿಗಳ 68,607 ಕೋಟಿ ರೂಪಾಯಿ ವಸೂಲಾಗದ ಹೆಚ್ಚುವರಿ ಸಾಲದ ಮೊತ್ತವನ್ನು ತಾಂತ್ರಿಕವಾಗಿ (ಟೆಕ್ನಿಕಲಿ) ಆರ್ ಬಿಐ ರೈಟ್ ಆಫ್ ಮಾಡಿರುವುದು ಆರ್ ಟಿಐ ನಲ್ಲಿ ಬಹಿರಂಗಗೊಂಡಿದೆ.
ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ಚೋಕ್ಸಿಯ ಕಂಪನಿ ಗೀತಾಂಜಲಿ ಜೆಮ್ಸ್ ಸಾಲಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 5,492 ಕೋಟಿ ರೂಪಾಯಿ ಸಾಲ ರೈಟ್ ಆಫ್ ಮಾಡಲಾಗಿದೆ ಎಂದು ಆರ್ ಟಿಐ ಅರ್ಜಿ ಸಲ್ಲಿಸಿದ್ದ ಸಾಕೇತ್ ಗೋಖಲೆ ತಿಳಿಸಿದ್ದಾರೆ.
ಆರ್ ಇ ಐ ಆ್ಯಗ್ರೋ ಲಿಮಿಟೆಡ್ ನ 4,314 ಕೋಟಿ, ವಿನ್ಸಮ್ ಡೈಮಂಡ್ಸ್ ನ 4,076 ಕೋಟಿ, ರೋಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ನ 2,850 ಕೋಟಿ ರೂಪಾಯಿ, ಕ್ಯೂಡೋಸ್ ಕೆಮೈ ಲಿಮಿಟೆಡ್ ನ 2,326 ಕೋಟಿ, ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್(ಇದು ಈಗ ರಾಮ್ ದೇವ್ ಒಡೆತನದಲ್ಲಿದೆ) ನ 2,212 ಕೋಟಿ, ಝೂಮ್ ಡೆವಲಪರ್ಸ್ ಪ್ರೈ.ಲಿನ 2012 ಕೋಟಿ ರೂಪಾಯಿ, ವಿಜಯ್ ಮಲ್ಯ ಕಿಂಗ್ ಫಿಶರ್ ನ 1,943 ಕೋಟಿ, ಫಾರೆವರ್ ಪ್ರಿಸಿಯೆಸ್ ಜ್ಯೂವೆಲ್ಲರಿ ಮತ್ತು ಡೈಮಂಡ್ ಪ್ರೈವೇಟ್ ಲಿಮಿಟೆಡ್ ನ 1,962 ಕೋಟಿ ರೂಪಾಯಿ, ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ ನ 1,915 ಕೋಟಿ ರೂಪಾಯಿ ರೈಟ್ ಆಫ್ ಮಾಡಲಾಗಿದೆ ಎಂದು ಆರ್ ಟಿಐನಲ್ಲಿ ತಿಳಿಸಲಾಗಿದೆ.
ಚೋಕ್ಸಿಯ ಇತರ ಸಂಸ್ಥೆಗಳಾದ ಗಿಲಿ ಇಂಡಿಯಾದ 1,447 ಕೋಟಿ ರೂಪಾಯಿ, ನಕ್ಷತ್ರಾ ಬ್ರ್ಯಾಂಡ್ಸ್ ನ 1,109 ಕೋಟಿ ರೂಪಾಯಿಯಷ್ಟು ರೈಟ್ ಆಫ್ ಮಾಡಲಾಗಿದೆ.
ರೈಟ್ ಆಫ್ ಎಂದರೇನು?
ವಜ್ರದ ವ್ಯಾಪಾರಿಗಳು, ಉದ್ಯಮಿಗಳು ಬ್ಯಾಂಕ್ ಗಳಿಂದ ಕೋಟ್ಯಂತರ ರೂಪಾಯಿ ಸಾಲವನ್ನು ಮಾಡಿ ದೇಶ ತೊರೆದು ಪರಾರಿಯಾಗುತ್ತಾರೆ. ಆದರೆ ಅವರನ್ನು ಸುಸ್ತಿದಾರ ಎಂದೇ ಕೋರ್ಟ್ ಹಾಗೂ ಬ್ಯಾಂಕ್ ಘೋಷಿಸಿರುತ್ತದೆ. ಸಾಲ ಮರುಪಾವತಿಸದೇ ಹಾಗೆಯೇ ಕೋಟ್ಯಂತರ ರೂಪಾಯಿ ಸಾಲ ಬ್ಯಾಂಕ್ ನ ಲೆಕ್ಕಪತ್ರದಲ್ಲಿ ಉಳಿದಿರುತ್ತದೆ. ಈ ಸಾಲವನ್ನು ಬ್ಯಾಲೆನ್ಸ್ ಶೀಟ್ ನಿಂದ ತೆಗೆದು ಹಾಕಲು ರೈಟಾಫ್ ಮಾಡುತ್ತದೆ. ಆದರೆ ರೈಟಾಫ್ ಮಾಡಿದರೂ ಸಾಲ ವಸೂಲಾತಿ ಪ್ರಕ್ರಿಯೆ ಮುಂದುವರಿಯುತ್ತದೆ. ಇದು ಮನ್ನಾ ಅಲ್ಲ. ನಂತರ ಸಾಲ ವಸೂಲಾದ ಮೇಳೆ ಅದನ್ನು ಲೆಕ್ಕಪತ್ರದಲ್ಲಿ ಲಾಭ ಎಂದು ಬ್ಯಾಂಕ್ ಗಳು ನಮೂದಿಸುತ್ತದೆ.