ಕುವೈತ್ ನಗರ: ಕೋವಿಡ್ 19 ಭೀತಿಯಿಂದ ಒಂದೆಡೆ ಉದ್ಯೋಗ ಕಳೆದುಕೊಳ್ಳುವ ಸಮಸ್ಯೆ ಒಂದೆಡೆಯಾದರೆ ಇದೀಗ ಕುವೈತ್ ನಲ್ಲಿರುವ ಭಾರತೀಯರಿಗೆ ಮತ್ತೊಂದು ಬರಸಿಡಿಲು ಬಂದೆರಗಿದೆ. ಹೌದು ವಿದೇಶಿ ಮೀಸಲಾತಿ ಮಸೂದೆಗೆ ಕುವೈತ್ ನ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಸಂಸದೀಯ ಸಮಿತಿ ಅಂಗೀಕಾರ ನೀಡಿದೆ. ಇದರ ಪರಿಣಾಮ ಎಂಟು ಲಕ್ಷ ಭಾರತೀಯರು ಕುವೈತ್ ಅನ್ನು ತೊರೆಯಬೇಕಾಗಲಿದೆ ಎಂದು ವರದಿ ಹೇಳಿದೆ.
ವಿದೇಶಿ ಮೀಸಲಾತಿ ಕರಡು ಮಸೂದೆ ಸಂವಿಧಾನಾತ್ಮಕವಾಗಿದೆ ಎಂದು ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಸಂಸದೀಯ ಸಮಿತಿ ಘೋಷಿಸಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಈ ನೂತನ ಮಸೂದೆಯ ಪ್ರಕಾರ, ಕುವೈತ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಭಾರತೀಯ ಸಮುದಾಯ ದೇಶದ ಒಟ್ಟು ಜನಸಂಖ್ಯೆಯ ಶೇ.15ರಷ್ಟು ಮೀರದಂತೆ ಕಾನೂನು ರೂಪಿಸಲಾಗಿದೆ. ಇದರಿಂದಾಗಿ ಕುವೈತ್ ನಲ್ಲಿರುವ ಎಂಟು ಲಕ್ಷ ಮಂದಿ ಭಾರತೀಯರು ಸ್ವದೇಶಕ್ಕೆ ಮರಳಬೇಕಾಗುತ್ತದೆ.
ಕುವೈತ್ ನ ಜನಸಂಖ್ಯೆ ಪ್ರಸ್ತುತ 43 ಲಕ್ಷವಿದೆ. ಇದೀಗ ಕುವೈತ್ ನಲ್ಲಿರುವ ಭಾರತೀಯರ ಸಂಖ್ಯೆ 14 ಲಕ್ಷ. ಶೇ.15ರಷ್ಟು ಮೀಸಲಾತಿ ಜಾರಿಯಾದರೆ, ಸುಮಾರು 8 ಲಕ್ಷ ಭಾರತೀಯರು ಕುವೈತ್ ತೊರೆಯಬೇಕಾಗುತ್ತದೆ. ವಿದೇಶಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಕುವೈತ್ ಸಮಗ್ರ ಯೋಜನೆಯನ್ನು ರೂಪಿಸುತ್ತಿರುವುದು ಭಾರತೀಯ ಸಮುದಾಯಕ್ಕೆ ದೊಡ್ಡ ಆಘಾತ ನೀಡಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ವೈರಸ್ ನಿಂದ ಕಂಗಾಲಾಗಿರುವ ಕುವೈತ್ ಅಧಿಕಾರಿಗಳು, ದೇಶದಲ್ಲಿರುವ ವಿದೇಶಿಗರ ಸಂಖ್ಯೆಯ ಕಡಿತಗೊಳಿಸುವ ಬಗ್ಗೆ ಸಲಹೆ ನೀಡಿದ್ದರು. ಜಾನ್ಸ್ ಹಾಪ್ ಕಿನ್ಸ್ ಯೂನಿರ್ವಸಿಟಿ ಅಂಕಿಅಂಶದ ಪ್ರಕಾರ, ಕುವೈತ್ ನಲ್ಲಿ 49 ಸಾವಿರ ಕೋವಿಡ್ 19 ಪ್ರಕರಣ ವರದಿಯಾಗಿದೆ.