ನೋಯ್ಡಾ: 16 ಕಿಲೋ ಮೀಟರ್ ಉದ್ದದ ದೆಹಲಿ-ಡೆಹ್ರಾಡೂನ್ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣಕ್ಕಾಗಿ ಸುಮಾರು 7,575 ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಪರ್ಯಾಯವಾಗಿ 1.76ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡಬೇಕಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ:ಲಡಾಖ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಐಎಎಫ್ ಅಪಾಚೆ ಹೆಲಿಕಾಪ್ಟರ್.. ಪೈಲಟ್‌ಗಳು ಸುರಕ್ಷಿತ
ಈ ಯೋಜನೆಯಲ್ಲಿ ಗಣೇಶ್ ಪುರ್-ಡೆಹ್ರಾಡೂನ್ ಪ್ರದೇಶದಲ್ಲಿ ಬಹುತೇಕ ಮರಗಳನ್ನು ಕಡಿಯಲಾಗಿತ್ತು. ಉತ್ತರಾಖಂಡ್ ನಲ್ಲಿ 4,983 ಮರ, ಉತ್ತರಪ್ರದೇಶದಲ್ಲಿ 2,592 ಮರಗಳನ್ನು ಕಡಿಯಲಾಗಿತ್ತು ಎಂದು ಎನ್ ಎಚ್ ಎಐ ಆರ್ ಟಿಐಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗಿದೆ ಎಂದು ತಿಳಿಸಿದೆ.
15.8 ಕಿಲೋ ಮೀಟರ್ ಉದ್ದದ ದೆಹಲಿ-ಡೆಹ್ರಾಡೂನ್ ಎಕ್ಸ್ ಪ್ರೆಸ್ ವೇ ನಿರ್ಮಾಣ ಕಾರ್ಯದ ನಂತರ ಮರಗಳ ಮರು ನೆಡುವಿಕೆ ಮತ್ತು ಅವುಗಳ ಸ್ಥಿತಿಗತಿ ಹೇಗಿದೆ ಹಾಗೂ ಎಷ್ಟು ಮರಗಳು ಜೀವಂತವಾಗಿದೆ ಎಂಬ ಬಗ್ಗೆ ನೋಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ಅಮಿತ್ ಗುಪ್ತಾ ಅವರು ಆರ್ ಟಿಐನಲ್ಲಿ ಮಾಹಿತಿ ಕೇಳಿದ್ದರು.
ಇದಕ್ಕೆ ಉತ್ತರಿಸಿರುವ ಪ್ರಾಜೆಕ್ಟ್ ನಿರ್ದೇಶಕ ಪಂಕಜ್ ಕುಮಾರ್ ಮೌರ್ಯ, ಉತ್ತರಪ್ರದೇಶದಲ್ಲಿ 155 ಮರಗಳನ್ನು ಸ್ಥಳಾಂತರಿಸಿ ನೆಡಲಾಗಿದ್ದು, ಇದರಲ್ಲಿ 121 ಮರಗಳು ಜೀವಂತವಾಗಿರುವುದಾಗಿ ತಿಳಿಸಿದ್ದಾರೆ.
ಈ ಯೋಜನೆಯಲ್ಲಿ 7575 ಮರಗಳನ್ನು ಕಡಿಯಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ 1,76,050 ಮರಗಳನ್ನು ನೆಡಲು ಅರಣ್ಯ ಇಲಾಖೆ ನಿರ್ಧರಿಸಿರುವುದಾಗಿ ಎನ್ ಎಚ್ ಎಐ ಮಾಹಿತಿ ನೀಡಿದೆ.
ಉತ್ತರಪ್ರದೇಶ ಮತ್ತು ಉತ್ತರಾಖಂಡ್ ಅರಣ್ಯ ಇಲಾಖೆಗಳಿಗೆ ಒಟ್ಟು 3,60,69,780 ರೂಪಾಯಿ ಪರಿಹಾರವನ್ನು ಪಾವತಿಸಲಾಗಿತ್ತು ಎಂದು ಎನ್ ಎಚ್ ಎಐ ತಿಳಿಸಿದೆ.