ಮುಂಬಯಿ: ಡಿಸ್ಕೌಂಟ್ ಸೇಲ್ ಅಂದರೆ ಸಾಕು. ಮುಗಿಬಿದ್ದು ಕೊಳ್ಳುತ್ತಾರೆ. ಅಂತರ್ಜಾಲದಲ್ಲಾದರೆ, ಡಿಸ್ಕೌಂಟ್ ಬಟನ್ ಒತ್ತುವ ಚಾಳಿ ಇದ್ದಿದ್ದೇ. ಇಂತಹ ಡಿಸ್ಕೌಂಟ್ ಸೇಲ್ ಕುತೂಹಲದಿಂದಾಗಿ ಶೇ.56.1ರಷ್ಟು ಭಾರತೀಯರು ಮೋಸದ ಜಾಲಕ್ಕೆ ಸಿಲುಕುತ್ತಿದ್ದಾರೆ ಎಂದಿದೆ ಸಮೀಕ್ಷೆ.
ಪ್ರಸಿದ್ಧ ಆ್ಯಂಟಿ ವೈರಸ್ ಕಂಪೆನಿ ಮೆಕಫಿ ಪ್ರಕಾರ ಶೇ.60.7ರಷ್ಟು ಮಂದಿ ಸುಳ್ಳು ಸೇವಾಸಂಸ್ಥೆಗಳ ಜಾಲಕ್ಕೆ ಅಂತರ್ಜಾಲದಲ್ಲಿ ಸಿಲುಕುತ್ತಾರೆ. ಇದರಲ್ಲಿ ಸಿಲುಕುವ ಭಾರತೀಯರ ಸಂಖ್ಯೆ ಶೇ.43ರಷ್ಟಿದೆ. ಅಲ್ಲದೇ ಕ್ರಿಸ್‌ಮಸ್ ವೇಳೆ ನಡೆಯುವ ಆನ್‌ಲೈನ್ ಸೇಲ್ ಹೆಸರಿನ ಡಿಸ್ಕೌಂಟ್ ಸೇಲ್ ವಂಚನೆಗೆ ಶೇ.56.1ರಷ್ಟು ಮಂದಿ ಭಾರತೀಯರು ಬಲಿಯಾಗುತ್ತಾರೆ ಎಂದಿದೆ.
ಸೈಬರ್ ಕ್ರೈಂ ಇತ್ತೀಚಿನ ದಿನಗಳಲ್ಲಿ ಏರುತ್ತಲೇ ಇದ್ದು, ಇಮೇಲ್‌ಗೆ ಕನ್ನ ಹಾಕುವುದು ಶೇ.25.3ರಷ್ಟಿದೆ. ಇದೇ ವೇಳೆ ಮೆಸೇಜ್‌ಗೆ ಕನ್ನ ಹಾಕುವುದು ಶೇ.21.1ರಷ್ಟಿದೆ. ಭಾರತೀಯರು ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಾರಂತೆ. ಇನ್ನು ಶೇ.60.2ರಷ್ಟು ರೋಬೋ ಕಾಲಿಂಗ್ ಮತ್ತು ಶೇ.57.1ರಷ್ಟು ಮಂದಿ ಸಿಮ್ ಜಾಕಿಂಗ್‌ಗೆ ಬಲಿಯಾಗುತ್ತಾರಂತೆ.
ಭಾರತೀಯರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ರಜಾ ದಿನಗಳ ಪ್ರವಾಸ ಮಾಡುವುದರಿಂದ ವೆಬ್‌ಸೈಟ್‌ಗಳಲ್ಲಿ ಬರುವ ಸುಳ್ಳು ಪ್ರವಾಸ ಮಾಹಿತಿ, ಆಯೋಜನೆ ಜಾಹೀರಾತುಗಳಿಗೆ ಶೇ.78.6ರಷ್ಟು ಬಲಿಯಾಗುತ್ತಿದ್ದಾರಂತೆ.
ಇನ್ನು ಸುಳ್ಳು ಆನ್‌ಲೈನ್ ಖರೀದಿ ವೆಬ್‌ಸೈಟ್‌ಗಳ ಮೂಲಕ ಶೇ.28.6ರಷ್ಟು ಭಾರತೀಯರು 15ರಿಂದ 20 ಸಾವಿರ ರೂ.ಗಳಷ್ಟು ಹಣ ಕಳೆದುಕೊಂಡಿದ್ದಾರಂತೆ. ಶೇ.53.5ರಷ್ಟು ಮಂದಿ ಆ್ಯಪ್‌ಗಳಲ್ಲಿ ಬರುವ ವಿಚಿತ್ರ ಜಾಹೀರಾತುಗಳಿಗೆ ಸಿಲುಕುತ್ತಿದ್ದಾರಂತೆ.