ನವದೆಹಲಿ: ಮಾರಣಾಂತಿಕ ಕೋವಿಡ್ 19 ವೈರಸ್ ಭೀತಿ ಹುಟ್ಟಿಸಿರುವ ನಡುವೆಯೇ ಭಾರತದಲ್ಲಿ 50ಕ್ಕೂ ಅಧಿಕ ವೈದ್ಯರುಗಳಿಗೆ ಹಾಗೂ ವೈದ್ಯ ಸಿಬ್ಬಂದಿಗಳಿಗೆ ಕೋವಿಡ್ 19 ವೈರಸ್ ಪಾಸಿಟಿವ್ ವರದಿ ಬಂದಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದೀಗ ವೈದ್ಯರಿಗೆ ಸೋಂಕು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ತಗುಲಿದೆಯಾ ಅಥವಾ ಹೊರಗಡೆಯಿಂದ ಬಂದಿದೆಯಾ ಎಂಬ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಅಂದಾಜು 50ಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿಗಳಿಗೆ ಕೋವಿಡ್ 19 ಪಾಸಿಟಿವ್ ಎಂದು ವರದಿ ಬಂದಿದೆ. ಆದರೆ ಇವರೆಲ್ಲರಿಗೂ ರೋಗಿಗಳಿಗೆ ಚಿಕಿತ್ಸೆ ನೀಡಿ ಸೋಂಕು ತಗುಲಿಲ್ಲ. ಕೆಲವು ಪ್ರಕರಣಗಳಲ್ಲಿ ವಿದೇಶದಿಂದ ಬಂದ ವ್ಯಕ್ತಿಗಳ ಸಂಪರ್ಕದಿಂದ ಬಂದಿರುವುದು ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಯಾರನ್ನು ಸಂಪರ್ಕಿಸಿದ್ದಾರೆ ಎಂದು ಪತ್ತೆಹಚ್ಚಿದಲ್ಲಿ ಇವರಿಗೆ ಹೇಗೆ ಕೋವಿಡ್ 19 ಸೋಂಕು ತಗುಲಿದೆ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ವೈಯಕ್ತಿಕ ಸುರಕ್ಷತಾ ಉಪಕರಣಗಳ ಕೊರತೆ ಇದೆ. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವಾಗ ತುಂಬಾ ಸುರಕ್ಷತಾ ಕ್ರಮ ಅನುಸರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಟಲಿಯಲ್ಲಿಯೂ ಕೂಡಾ ಮಾರಣಾಂತಿಕ ಕೋವಿಡ್ 19 ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯಕೀಯ ಸಿಬ್ಬಂದಿಗಳು ಕೂಡಾ ಸಾವನ್ನಪ್ಪಿರುವುದನ್ನು ಗಮನಿಸಬೇಕಾಗಿದೆ. ಭಾರತದಲ್ಲಿಯೂ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ವರದಿ ತಿಳಿಸಿದೆ.