ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದು, ಪ್ರಾಧಿಕಾರ ಕೋರಿದ ದಾಖಲೆಗಳನ್ನು ಒದಗಿಸದ 4,000ಕ್ಕೂ ಅಧಿಕ ಅಭ್ಯರ್ಥಿಗಳು ಅನರ್ಹತೆಯ ಭೀತಿ ಎದುರಿಸುತ್ತಿದ್ದಾರೆ.
ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸಹಿತ ವಿವಿಧ ವೃತ್ತಿಪರ ಕೋರ್ಸುಗಳ 2020-21ನೇ ಸಾಲಿನ ಸರಕಾರಿ ಕೋಟಾದ ಸೀಟುಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ವಿವಿಧ ರ್‍ಯಾಂಕ್ ಪಡೆದಿದ್ದರು. ಅವರೆಲ್ಲರಿಗೂ ಕಡ್ಡಾಯವಾಗಿ ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲು ಸೂಚಿಸಲಾಗಿತ್ತು. ಆದರೆ 4,330 ಅಭ್ಯರ್ಥಿಗಳು ಸೂಕ್ತ ದಾಖಲೆ ಒದಗಿಸದೆ ಅನರ್ಹರ ಸಾಲಿಗೆ ಸೇರಿದ್ದಾರೆ ಎಂದು ಪ್ರಾಧಿಕಾರ ಖಚಿತಪಡಿಸಿದೆ.
ಈ ವರ್ಷ ಆನ್‌ಲೈನ್ ವ್ಯವಸ್ಥೆ ಮಾಡಿ ರುವುದರಿಂದ ದಾಖಲೆ ಅಪ್‌ಲೋಡ್ ಮಾಡದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ರಾಜ್ಯ ಪಠ್ಯಕ್ರಮದ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಪಿಯು ಇಲಾಖೆ ಮೂಲಕ ಪಡೆಯಲಾಗುತ್ತದೆ. ಅದರೆ ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ನವರು ಅಂಕಪಟ್ಟಿಯನ್ನು ಅಪ್‌ಲೋಡ್ ಮಾಡ ಬೇಕು. ಅಲ್ಲದೆ, ಜಾತಿ, ಆದಾಯ ಹಾಗೂ ವಿವಿಧ ಮೀಸಲಾತಿ ಕೋರಿಕೆಗೆ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಈಗ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಿಮ ಪಟ್ಟಿಯಲ್ಲಿ ನಿರ್ದಿಷ್ಟ ಸಂಖ್ಯೆ ತಿಳಿಯಲಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಉಲ್ಲೇಖೀಸಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಾಕಷ್ಟು ಅವಕಾಶ ನೀಡಿದ್ದೇವೆ. ಮೀಸಲಾತಿ ಯಡಿ ಸೀಟು ಪಡೆಯಲು ಕೆಲವು ದಾಖಲೆ ಗಳು ಕಡ್ಡಾಯವಾಗಿವೆ. ಹೀಗಾಗಿ ಸೂಕ್ತ ದಾಖಲೆಗಳನ್ನು ಅಪ್‌ಲೋಡ್ ಮಾಡದ ವರನ್ನು ಅನರ್ಹರ ಪಟ್ಟಿಗೆ ಸೇರಿಸಿದ್ದೇವೆ.
– ವೆಂಕಟ್‌ರಾಜು, ಪರೀಕ್ಷಾ ಪ್ರಾಧಿಕಾರದ ಎಕ್ಸಿಕ್ಯೂಟಿವ್ ಡೈರೆಕ್ಟರ್
ರಾಜು ಖಾರ್ವಿ ಕೊಡೇರಿ