ದಿಯೋಗಢ್: ಜಾರ್ಖಂಡ್ ನ ದೇವಗಢ ಜಿಲ್ಲೆಯ ತ್ರಿಕೂಟ ಪರ್ವತದಲ್ಲಿ ಎರಡು ಕೇಬಲ್ ಕಾರ್ ಗಳು ಢಿಕ್ಕಿಯಾಗಿ 40 ಗಂಟೆಗೂ ಹೆಚ್ಚು ಕಾಲ ಕಳೆದಿದ್ದು, ಇನ್ನೂ ಇಬ್ಬರು ಪ್ರವಾಸಿಗರು ಸಿಲುಕಿಕೊಂಡಿದ್ದು, 40ಕ್ಕೂ ಹೆಚ್ಚು ಮಂದಿಯನ್ನು ವಾಯುಪಡೆಯ ಹೆಲಿಕಾಪ್ಟರ್ ಗಳ ಮೂಲಕ ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಉಡುಪಿಯಲ್ಲಿ ಆತ್ಮಹತ್ಯೆ!
ಭಾರತೀಯ ವಾಯುಪಡೆ, ಸೇನೆ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಹಾಗೂ ಎನ್ ಡಿಆರ್ ಎಫ್ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು ಎಂದು ದಿಯೋಗಢ ಡೆಪ್ಯುಟಿ ಕಮಿಷನರ್ ಮಂಜುನಾಥ್ ಭಜಂತ್ರಿ ಮಾಹಿತಿ ನೀಡಿದ್ದಾರೆ.
ಕೇಬಲ್ ಕಾರ್ ಢಿಕ್ಕಿಯಾಗಿ ಅಪಾಯದಲ್ಲಿ ಸಿಲುಕಿದ್ದವರಿಗೆ ಡ್ರೋನ್ ಗಳ ನೆರವಿನ ಮೂಲಕ ನೀರು ಮತ್ತು ಆಹಾರವನ್ನು ಪೂರೈಕೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೋಪ್ ವೇಯಲ್ಲಿ ಎರಡು ಕೇಬಲ್ ಕಾರ್ ಗಳು ಢಿಕ್ಕಿಯಾದ ಪರಿಣಾಮ ಸಾವನ್ನಪ್ಪಿರುವವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಸೂರ್ಯಾಸ್ತದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಪರ್ವತದ ದಟ್ಟಾರಣ್ಯ ಮತ್ತು ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳವಾರ (ಏ.12) ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.
ಕೇಬಲ್ ಕಾರ್ ಅವಘಡದ ಬಗ್ಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.