ಕಾಸರಗೋಡು: ಮಳೆಗಾಲದಲ್ಲಿ ಜಲಸಂರಕ್ಷಣೆ ನಡೆಸುವ ಮೂಲಕ ಭೂಗರ್ಭ ಜಲ ಮಟ್ಟ ಹೆಚ್ಚಿಸುವ ಮತ್ತು ಕುಡಿಯುವ ನೀರಿನ ಕ್ಷಾಮ ಪರಿಹಾರ ನಡೆಸುವ ನಿಟ್ಟಿನಲ್ಲಿ 38 ಸಾವಿರಕ್ಕೂ ಅಧಿಕ ಮಳೆನೀರು ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಮಡಿಕೈ ಗ್ರಾಮ ಪಂಚಾಯತ್ ಗಮನ ಸೆಳೆದಿದೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ಮಳೆನೀರನ್ನು ಭೂಮಿ ಯಡಿಗೆ ತಲಪಿಸುವ ರೀತಿಯಲ್ಲಿ ಈ ಇಂಗು ಗುಂಡಿಗಳು ಪರಿಪೂರ್ಣವಾಗಿವೆ. ಮಡಿಕೈ ಗ್ರಾಮ ಪಂಚಾಯತ್‌ನ 15 ವಾರ್ಡ್‌ಗಳಲ್ಲಿ 38 ಸಾವಿರಕ್ಕೂ ಅಧಿಕ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ.
ಒಂದು ವಾರ್ಡ್‌ನಲ್ಲಿ 500ಕ್ಕೂ ಅಧಿಕ ಮಳೆ ನೀರು ಇಂಗುಗುಂಡಿಗಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಕಾರ ನಿರ್ಮಾಣ ನಡೆಸಲಾಗಿದೆ.
ಒಂದೂವರೆ ಮೀಟರ್ ಉದ್ದ, 60 ಸೆ.ಮೀ. ಅಗಲ, 60 ಸೆ.ಮೀ. ಆಳದಲ್ಲಿ ಗುಳಿಗಳು ಸಿದ್ಧವಾಗಿವೆ. ಮಳೆನೀರು ಗುಂಡಿಗಳಲ್ಲದೆ ತೆಂಗಿನ ನಾರಿನ ಗುಂಡಿಗಳನ್ನೂ ಮಡಿಕೈ ಗ್ರಾಮ ಪಂಚಾಯತ್‌ನ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ. ತೆಂಗಿನ ಮರದ ಬುಡದಲ್ಲಿ ಸುತ್ತಲೂ ಗುಳಿಗಳನ್ನು ನಿರ್ಮಿಸಿ, ಅದರಲ್ಲಿ ತೆಂಗಿನ ನಾರು ತುಂಬಿಸಿ, ಮಳೆಯ ನೀರು ಮಣ್ಣಲ್ಲಿ ಇಂಗುವಂತೆ ಮಾಡುವುದು ಇಲ್ಲಿನ ವಿಧಾನ.
ಇವುಗಳ ಜತೆಗೆ ನೂತನವಾಗಿ 6 ಕೆರೆಗಳು, 6 ಬಾವಿಗಳನ್ನು ನಿರ್ಮಿಸಲಾಗಿದೆ. 29 ತೋಡುಗಳ ನವೀಕರಣ ನಡೆಸಲಾಗಿದೆ. ಪ್ರತಿ ವಾರ್ಡ್‌ನ 60ಕ್ಕೂ ಅಧಿಕ ಮನೆಗಳಲ್ಲಿ ಬಾವಿಗಳನ್ನು ರೀಚಾರ್ಜ್ ನಡೆಸಲಾಗಿದೆ. ಜೊತೆಗೆ ತೀಯರ್ ಸೇತುವೆಯ ಪುನರ್ ನಿರ್ಮಾಣ, ತಡೆಗೋಡೆ ನಿರ್ಮಾಣ ನಡೆಸಲಾಗಿದೆ. ಪಂಚಾಯತ್ ಅಲ್ಲದೆ ಜಲಪ್ರಾಧಿಕಾರ, ಕಿರು ನೀರಾವರಿ ಇಲಾಖೆ, ಉದ್ಯೋಗ ಖಾತರಿ ಯೋಜನೆ, ಕುಟುಂಬಶ್ರೀಗಳ ಸಹಕಾರದೊಂದಿಗೆ ವಿವಿಧ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸಲಾಗುತ್ತಿದೆ.
ಜಲಸಂರಕ್ಷಣೆ ಸಂಬಂಧ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಮಳೆಗಾಲವಾಗಿದ್ದರೂ, ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಮಳೆ ಬಹಳ ಕಡಿಮೆಯಾಗಿರುವ ಮತ್ತು ಬಿರುಸಿನ ಬಿಸಿಲು ಇರುವ ಹಿನ್ನೆಲೆಯಲ್ಲಿ ತೀವ್ರತರ ಕುಡಿಯುವ ನೀರಿನ ಬರ ತಲೆದೋರಿದೆ. ಇವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಫಲದಾಯಕವಾಗಿವೆ.