ಮುಂಬಯಿ : ರಾಜ್ಯ ಸರಕಾರ ತಮ್ಮ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಆಗ್ರಹಿಸಿ 30,000ಕ್ಕೂ ಅಧಿಕ ರೈತರು ಮಹಾರಾಷ್ಟ್ರ ವಿಧಾನಸಭೆಯ ಮುಂದೆ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸುವ ಸಲುವಾಗಿ ನಾಶಿಕ್‌ನಿಂದ ಮುಂಬಯಿಗೆ ಜಾಥಾ ಆರಂಭಿಸಿದ್ದಾರೆ.
ರೈತರ ಈ ಬೃಹತ್ ಜಾಥಾ ಇದೇ ಮಾರ್ಚ್ 12ರ ಭಾನುವಾರ ಮುಂಬಯಿ ತಲುಪಲಿದೆ. ಕೃಷಿ ಸಾಲ ಸಂಪೂರ್ಣ ಮನ್ನಾ ಮಾತ್ರವಲ್ಲದೆ ಸರಕಾರ ರೈತರ ಕೃಷಿ ಭೂಮಿಯನ್ನು ಮೂಲ ಸಕೌರ್ಯ ಯೋಜನೆಗಳಿಗೆಂದು ಬಲವಂತದಿಂದ ಸ್ವಾಧೀನ ಪಡಿಸಕೂಡದು ಮತ್ತು ರೈತರ ಕೃಷಿ ಉದ್ದೇಶದ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕು ಎಂಬುದು ಪ್ರತಿಭಟನಕಾರರ ಇತರ ಬೇಡಿಕೆಗಳಾಗಿವೆ.
ರೈತರು ತಮ್ಮ ಪ್ರತಿಭಟನಾ ಜಾಥಾವನ್ನು ಕಳೆದ ಮಂಗಳವಾರ ನಾಶಿಕ್ ಕೇಂದ್ರ ಭಾಗದಲ್ಲಿರುವ ಸಿಬಿಎಸ್ ಚೌಕದಿಂದ ಆರಂಭಿಸಿದ್ದು ಮುಂಬಯಿ – ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು 180 ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ.
ಇಂದು ಶುಕ್ರವಾರ ಅಖೀಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ದವಳೆ, ಸ್ಥಳೀಯ ಶಾಸಕ ಜೆ ಪಿ ಗಾವಿತ್ ಮತ್ತು ಇತರ ನಾಯಕರ ನೇತೃತ್ವದ ಈ ಜಾಥಾ ಥಾಣೆ ತಲುಪಿತು.
ಕಳೆದ ವರ್ಷ ಜೂನ್‌ನಿಂದ ಈ ತನಕ 1,753 ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ 34,000 ಕೋಟಿ ರೂ.ಗಳ ಶರ್ತಬದ್ಧ ಕೃಷಿ ಸಾಲ ಮನ್ನಾ ಪ್ರಕಟಿಸಿತ್ತು ಎಂದು ದವಳೆ ತಿಳಿಸಿದರು.