ಢಾಕಾ: ದೇಶಾದ್ಯಂತ ಬಾಲಿವುಡ್ ನ ದ ಕಾಶ್ಮೀರ್ ಫೈಲ್ಸ್ ಸಿನಿಮಾ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದ್ದು, ಮತ್ತೊಂದೆಡೆ ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ನ ರಾಧಾಕಾಂತ ದೇವಾಲಯವನ್ನು ಸುಮಾರು 200 ಜನರ ಗುಂಪೊಂದು ಧ್ವಂಸಗೊಳಿಸಿ, ಲೂಟಿಗೈದಿರುವ ಘಟನೆ ಗುರುವಾರ (ಮಾರ್ಚ್ 17) ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕ್ರೀಡಾಂಗಣದಲ್ಲಿ ಸಿಕ್ಕ ಬ್ರಾಸ್ ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ
ಢಾಕಾದ ವಾರಿಯ ಲಾಲ್ ಮೋಹನ್ ಸಾಹಾ ಬೀದಿಯಲ್ಲಿರುವ ಇಸ್ಕಾನ್ ನ ರಾಧಾಕಾಂತ ದೇವಸ್ಥಾನವನ್ನು ಧ್ವಂಸಗೊಳಿಸಿದ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.
ಹಾಜಿ ಶಫಿವುಲ್ಲಾ ಸುಮಾರು 200 ಜನರ ಗುಂಪಿನ ನೇತೃತ್ವ ವಹಿಸಿರುವುದಾಗಿ ವರದಿ ಹೇಳಿದೆ. ಭಾರತದ ಇಸ್ಕಾನ್ ನ ಉಪಾಧ್ಯಕ್ಷ ರಾಧಾರಮಣ್ ದಾಸ್, ಈ ಘಟನೆಯನ್ನು ಖಂಡಿಸಿದ್ದಾರೆ. ಹೋಳಿ ಮತ್ತು ದೋಲ್ ಯಾತ್ರೆ ನಡೆಯುವ ಸಂದರ್ಭದಲ್ಲಿಯೇ ದೇವಾಲಯ ಧ್ವಂಸಗೊಳಿಸಿರುವ ಘಟನೆ ನಡೆದಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಬಾಂಗ್ಲಾದೇಶದ ನಾನೌರ್ ದಿಘೀ ಲೇಕ್ ಸಮೀಪದ ಕೊಮಿಲ್ಲಾ ನಗರದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪರಿಣಾಮ ನಡೆದ ಹಿಂಸಾಚಾರದಲ್ಲಿ ಮೂವರು ಮಂದಿ ಸಾವಿಗೀಡಾಗಿದ್ದರು ಎಂದು ವರದಿ ತಿಳಿಸಿದೆ.