ಕ್ಯಾಲಿಫೋರ್ನಿಯ: ಧಾರ್ಮಿಕ ಸಮಾವೇಶದರಲ್ಲಿ ಪಾಲ್ಗೊಂಡ ವ್ಯಕ್ತಿಯೋರ್ವನಿಗೆ ಕೋವಿಡ್-19 ಇರುವುದು ಮರುದಿನ ಪತ್ತೆಯಾದ ಬಳಿಕ ಸಮಾವೇಶದಲ್ಲಿ ಪಾಲ್ಗೊಂಡ ಇತರ 180 ಮಂದಿಗೆ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.
ಕೋವಿಡ್ ಸೋಂಕು ಪತ್ತೆಯಾದ ವ್ಯಕ್ತಿಯನ್ನು ಈಗ ಏಕಾಂತವಾಸಕ್ಕೆ ಕಳುಹಿಸಲಾಗಿದೆ. ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು ಸ್ವಯಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ ಎಂದು ಬ್ಯೂಟ್ ಕೌಂಟಿಯ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.
ಕೆಲ ಧಾರ್ಮಿಕ ಸಂಸ್ಥೆಗಳು ಹಾಗೂ ಕೋವಿಡ್ ವ್ಯಾಪಿಸುವಿಕೆಯನ್ನು ನಿಯಂತ್ರಿಸಲು ಶ್ರಮಿಸುತ್ತಿರುವ ಅಧಿಕಾರಿಗಳ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟಕ್ಕೆ ಈ ಪ್ರಕರಣ ಕೈಗನ್ನಡಿ ಹಿಡಿಯುತ್ತದೆ, ಮನೆಯಲ್ಲೇ ಉಳಿಯುವುದಕ್ಕೆ ಆದೇಶ ಹೊರಡಿಸಲಾಗಿದ್ದರೂ ಕೌಂಟಿಗಳ ಸುತ್ತಮುತ್ತ ಕೆಲ ಧಾರ್ಮಿಕ ಸಮಾವೇಶಗಳು ಈಗಲೂ ನಡೆಯುತ್ತಿವೆ. ಮಾರ್ಚ್‌ನಲ್ಲಿ ಜಾರಿಗೊಳಿಸಲಾದ ಸ್ಟೇ ಎಟ್ ಹೋಮ್ ಆದೇಶದ ಬಳಿಕ ಹಂತಗಳಲ್ಲಿ ಕೆಲ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳಲಾಗುತ್ತಿದ್ದರೂ ಧಾರ್ಮಿಕ ಸಮಾವೇಶಗಳ ಮೇಲೆ ನಿರ್ಬಂಧ ಈಗಲೂ ಮುಂದುವರಿದಿದೆ.
ಕೋವಿಡ್ ನಡುವೆ ಧಾರ್ಮಿಕ ಸಮಾವೇಶಗಳಿಗೆ ಅವಕಾಶ ನೀಡಬೇಕೇ ಎಂಬ ವಿಚಾರ ಧಾರ್ಮಿಕ ನಾಯಕರು ಹಾಗೂ ಸಾರ್ವಜನಿಕ ಅಧಿಕಾರಿಗಳ ನಡುವೆ ಕಾನೂನು ಹೋರಾಟಕ್ಕೆ ಕೂಡ ಕಾರಣವಾಗಿದೆ. ಧಾರ್ಮಿಕ ಸಮಾವೇಶಗಳಿಗೆ ಅವಕಾಶವಿತ್ತಲ್ಲಿ ಕೋವಿಡ್ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದೆಂದು ಅಧಿಕಾರಿಗಳು ವಾದಿಸುತ್ತಿದ್ದಾರೆ. ಆದರೆ ಇದನ್ನು ವಿರೋಧಿಸುತ್ತಿರುವ ಕೆಲ ಧಾರ್ಮಿಕ ನಾಯಕರು ಅಮೆರಿಕ ಹಾಗೂ ರಾಜ್ಯಗಳ ಸಂವಿಧಾನಗಳಲ್ಲಿ ಖಾತರಿಪಡಿಸಲಾಗಿರುವ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನಿಂದ ತಮ್ಮನ್ನು ವಂಚಿಸಿದಂತಾಗುತ್ತದೆ ಎಂದು ಹೇಳುತ್ತಿದ್ದಾರೆ.
ಕಳೆದ ತಿಂಗಳು ಸ್ಯಾಕ್ರಮೆಂಟೋ ಕೌಂಟಿಯಲ್ಲಿ ಸಂಭವಿಸಿದ ಪ್ರಕರಣವೊಂದರಲ್ಲಿ ಚರ್ಚ್ ವೊಂದರ ಸಂಪರ್ಕದಲ್ಲಿದ್ದ 71 ಮಂದಿಗೆ ಕೋವಿಡ್ ಸೋಂಕು ತಗಲಿತ್ತು.
ಕ್ಯಾಲಿಫೋರ್ನಿಯ ಸ್ಟೇಟ್‌ನಲ್ಲಿ ಈತನಕ 78,800ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು 3,200ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿಯ ಅಂಕಿ-ಅಂಶಗಳು ತಿಳಿಸಿವೆ.