Advertisement

ನಗರದಲ್ಲಿ ಜರ್ಮನಿಯ 1700ಕ್ಕೂ  ಅಧಿಕ ಅಂಚೆ ಚೀಟಿಗಳು!

11:46 AM Nov 10, 2017 | |

ಮಹಾನಗರ: ಅಂಚೆ ಚೀಟಿ ಸಂಗ್ರಹ ಕೆಲವರ ಹವ್ಯಾಸ. ದೇಶದ ಮಹಾಪುರುಷರ ನೆನಪಿನಲ್ಲಿ ಅಥವಾ ಪ್ರಖ್ಯಾತ ಸ್ಥಳದ ಹಿನ್ನೆಲೆಯಲ್ಲಿ ರೂಪಿಸಲ್ಪಡುವ ಅಂಚೆ ಚೀಟಿಗಳನ್ನು ಕಳೆದ ಕೆಲವು ವರ್ಷಗಳಿಂದ ಜತನದಿಂದ ಕಾಪಾಡಿಕೊಂಡವರಿದ್ದಾರೆ.

Advertisement

ವಿಶೇಷವೆಂದರೆ, ಜರ್ಮನಿ ದೇಶದ ಅಂಚೆ ಚೀಟಿಗಳನ್ನು ಸುದೀರ್ಘ‌ ವರ್ಷದಿಂದ ಸಂಗ್ರಹ ಮಾಡಿದ ಅಪರೂಪದ ಸಾಧಕರೋರ್ವರು ನಗರದಲ್ಲಿದ್ದಾರೆ. ನಗರದ ಸಂತ ಅಲೋಶಿಯಸ್‌ ಕಾಲೇಜು ಆನ್ವಯಿಕ ಜೀವಶಾಸ್ತ್ರ ಪ್ರಯೋಗಾಲಯದ ನಿರ್ದೇಶಕ ಡಾ| ಫಾ|
ಲಿಯೋ ಡಿ’ಸೋಜಾ ಎಸ್‌.ಜೆ. ಅವರು ಜರ್ಮನ್‌ ಅಂಚೆ ಚೀಟಿಗಳ ಸಂಗ್ರಹದ ಮೂಲಕ ಗಮನ ಸೆಳೆದಿದ್ದಾರೆ.

ಇಂತಹ ಅಪರೂಪ ಹಾಗೂ ಕುತೂಹಲದ ಅಂಚೆ ಚೀಟಿಗಳ ಪ್ರದರ್ಶನವನ್ನು ಅಲೋಶಿಯಸ್‌ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಾಗೂ ಗುರುವಾರ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿತ್ತು. ವಿಶೇಷವೆಂದರೆ, ಕಳೆದ 54 ವರ್ಷಗಳ ಕಾಲ ಸಂಗ್ರಹಿಸಿದ ಜರ್ಮನ್‌ ಅಂಚೆ ಚೀಟಿಗಳು, ಪೋಸ್ಟ್‌ ಕಾರ್ಡ್‌ಗಳು, ಕವರ್‌ಗಳನ್ನು ಸಂಗ್ರಹಿಸುವ ಮೂಲಕ ಫಾ| ಲಿಯೋ ಅವರು ವಿಶೇಷ ಕಾರ್ಯ ನಡೆಸಿದ್ದಾರೆ. 

1963ರಿಂದ 2017ರ ವರೆಗಿನ 54 ವರ್ಷಗಳ ಸ್ಟಾಂಪ್‌ ಮತ್ತು ಪತ್ರಗಳನ್ನು ಮಂಗಳೂರಿನಲ್ಲಿ ಕೈಗೊಂಡ ಪ್ರದರ್ಶನದಲ್ಲಿ ಇರಿಸಲಾಗಿತ್ತು. ಸುಮಾರು 1,700ಕ್ಕೂ ಅಧಿಕ ವಿಶಿಷ್ಟ ಸ್ಮರಣಾರ್ಥಕ ಅಂಚೆ ಚೀಟಿಗಳು, 100ಕ್ಕೂ ಅಧಿಕ ಅಂಚೆ ಪತ್ರಗಳು ಹಾಗೂ ಪೋಸ್ಟ್‌ ಕಾರ್ಡ್‌ಗಳ ಪ್ರದರ್ಶನವೂ ನಡೆಯಿತು. ಅಂಚೆ ಚೀಟಿ ಸಂಗ್ರಹದ ಬಗ್ಗೆ ‘ಉದಯವಾಣಿ ಸುದಿನ’ ಜತೆಗೆ ಮಾತನಾಡಿದ ಅವರು, ‘ಅಂಚೆ ಚೀಟಿಗಳು ಕಳೆದು ಹೋದ ದಿನಗಳಿಗೆ ಒಂದು ಸಾಕ್ಷಿ. ಇತಿಹಾಸವನ್ನು ನೆನಪಿಸಿಕೊಳ್ಳಲು ಇದೊಂದು ಆಧಾರ. ಹಳೆ ಪತ್ರಗಳು, ಪೋಸ್ಟ್‌ಕಾರ್ಡ್‌ಗಳು ಅಪೂರ್ವ ನೆನಪುಗಳನ್ನು ಕೆದಕಬಲ್ಲುವು. ಜರ್ಮನಿಯ ಇತಿಹಾಸದ ವೈವಿಧ್ಯಮಯ ಸಂಗ್ರಹವನ್ನು ಈ ನಿಟ್ಟಿನಲ್ಲಿ ಮಾಡಲಾಗಿದೆ. ಆಯಾ ವರ್ಷಕ್ಕೆ ಅನುಗುಣವಾಗಿ ಅಂಚೆ ಚೀಟಿಯನ್ನು ವಿಭಾಗಿಸಿ ಸಂಗ್ರಹಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿತ್ತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next