ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ(ಸಿಎಎ) ವಿರುದ್ಧ ಸಲ್ಲಿಸಲಾಗಿರುವ 144 ಅರ್ಜಿಗಳನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂರು ನ್ಯಾಯಾಧೀಶರ ಪೀಠವು ಅರ್ಜಿಗಳ ವಿಚಾರಣೆ ನಡೆಸಲಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ಸಲ್ಲಿಸಿದ್ದ ಅರ್ಜಿಗಳು ಸೇರಿದಂತೆ 142 ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠವು ಆಲಿಸಲಿದೆ.
ಅರ್ಜಿದಾರರ ಪಟ್ಟಿಯಲ್ಲಿ ಹಲವಾರು ರಾಜಕೀಯ ಪಕ್ಷಗಳು ಕೂಡ ಇದ್ದು – ಕಾಂಗ್ರೆಸ್, ಡಿಎಂಕೆ, ಸಿಪಿಐ, ಸಿಪಿಎಂ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಥವಾ ಐಯುಎಂಎಲ್, ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಮತ್ತು ಕಮಲ್ ಹಾಸನ್ ಅವರ ಮಕ್ಕಲ್ ನೀಧಿ ಮಯ್ಯಮ್ ಮುಂತಾದವು ಸೇರಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014 ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ದೇಶಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ್ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ಸಿಎಎ ಅನುಕೂಲ ಕಲ್ಪಿಸಿದೆ ಆದರೆ ಈ ಕಾಯ್ದೆ ಜಾರಿಗೆ ಸಂಬಂಧಿಸಿ ಭಿನ್ನಾಭಿಪ್ರಾಯಗಳಿದ್ದು ಜನವರಿ 10 ರಿಂದ ಜಾರಿಗೆ ಬಂದ ಶಾಸನದ ಅನುಷ್ಠಾನ ತಡೆಯಲು ಅರ್ಜಿಗಳು ಮನವಿ ಮಾಡಿವೆ.
ಸಿಎಎಯನ್ನು ಸಾಂವಿಧಾನಿಕವೆಂದು ಘೋಷಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಜನವರಿ 9 ರಂದು ನಿರಾಕರಿಸಿತು, ದೇಶವು ಕಷ್ಟದ ಸಮಯಗಳನ್ನು ಎದುರಿಸುತ್ತಿದೆ ಮತ್ತು ಸಾಕಷ್ಟು ಹಿಂಸಾಚಾರಗಳು ನಡೆಯುತ್ತಿವೆ ಮತ್ತು ಶಾಂತಿಯ ಪ್ರಯತ್ನ ನಡೆಯಬೇಕೆಂದು ಅದು ಅಭಿಪ್ರಾಯಪಟ್ಟಿದೆ. ಸಿಎಎ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಧರ್ಮದ ಆಧಾರದ ಮೇಲೆ ಬೇಧ ಮಾಡುವ ಮೂಲಕ ಅಕ್ರಮ ವಲಸಿಗರ ಒಂದು ಭಾಗಕ್ಕೆ ಪೌರತ್ವವನ್ನು ನೀಡಲು ಉದ್ದೇಶಿಸಿದೆ ಎಂದು ಐಯುಎಂಎಲ್ ತನ್ನ ಮನವಿಯಲ್ಲಿ ಹೇಳಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಡಿಸೆಂಬರ್ 12 ರಂದು 2019ರ ಪೌರತ್ವ (ತಿದ್ದುಪಡಿ) ಮಸೂದೆಗೆಅಂಕಿತ ಹಾಕಿದ್ದರು.
ಸರ್ಕಾರದ ಸಿಎಎ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ ಮತ್ತು ಮುಸ್ಲಿಮರ ವಿರುದ್ಧ ಸ್ಪಷ್ಟವಾಗಿ ತಾರತಮ್ಯ ಮಾಡುವ ಉದ್ದೇಶವನ್ನು ಹೊಂದಿದೆ.ಈ ಕಾಯಿದೆಯು ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಮಾತ್ರ ಹೆಚ್ಚಿನ ಮಹತ್ವ ನೀಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.