ಹೈದರಾಬಾದ್: ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಕೊಲ್ಲಲಾಗಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತ ಗೌತಮ್ ಎಂಬುವರು ಸಲ್ಲಿಸಿರುವ ದೂರಿನಲ್ಲಿ, ಸಿದ್ದಿಪೇಟೆ ಜಿಲ್ಲೆಯ ಜಗದೇವಪುರ ಮಂಡಲದ ತಿಗುಲ್ ಗ್ರಾಮದಲ್ಲಿ ನಾಯಿಗಳ ಸಾಮೂಹಿಕ ಹತ್ಯೆ ನಡೆದಿದೆ. ಗ್ರಾಮದ ಸರಪಂಚ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯು ನಾಯಿ ಹಿಡಿಯುವವರನ್ನು ನೇಮಿಸಿ ಬೀದಿ ನಾಯಿಗಳಿಗೆ ಮಾ.27ರಂದು ವಿಷ ಚುಚ್ಚುಮದ್ದು ನೀಡಿ ಕೊಂದು ಹಾಕಿದ್ದರು ಎಂದು ದೂರಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ ನಾಯಿಗಳ ಶವಗಳು ಗುಂಡಿಯಲ್ಲಿ ಬಿದ್ದಿರುವುದನ್ನು ಕಾಣಬಹುದು.
ಇದನ್ನೂ ಓದಿ:ದಿಢೀರ್ ಬೆಳವಣಿಗೆ; ಎಂಕ್ಯೂಎಂ ಬೆಂಬಲ ವಾಪಸ್, ಬಹುಮತ ಕಳೆದುಕೊಂಡ ಇಮ್ರಾನ್ ಸರ್ಕಾರ
ಈ ಕುರಿತು ಸಿದ್ದಿಪೇಟೆ ಜಿಲ್ಲಾಧಿಕಾರಿ ಹಾಗೂ ಸಿದ್ದಿಪೇಟೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಗ್ರಾಮದ ಸರಪಂಚ್ ಮತ್ತು ಕಾರ್ಯದರ್ಶಿಯನ್ನು ಅಮಾನತು ಮಾಡುವಂತೆ ಕೋರಿರುವುದಾಗಿ ಕಾರ್ಯಕರ್ತ ಹೇಳಿದರು.