ಗಿನಿಯಾ: ಪಶ್ಚಿಮ ಆಫ್ರಿಕಾದ ಗಿನಿಯಾದಲ್ಲಿ ಭಾನುವಾರ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ ನಡೆದು ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಗಿನಿಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್’ಜೆರೆಕೋರ್‌ನಲ್ಲಿ ಫುಟ್‌ಬಾಲ್ ಪಂದ್ಯವಳಿ ನಡೆದಿದ್ದು ಈ ವೇಳೆ ಅಲ್ಲಿ ನೆರೆದಿದ್ದ ಅಭಿಮಾನಿಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು ಇದರಿಂದ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ನೂರಾರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಇಲ್ಲಿನ ಪ್ರತ್ಯಕ್ಷದರ್ಶಿಯ ಹೇಳಿಕೆಯ ಪ್ರಕಾರ ಭಾನುವಾರ ನಡೆದ ಪಂದ್ಯವು 2021 ರ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡು ಅಧ್ಯಕ್ಷನಾದ ಗಿನಿಯಾ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರನ್ನು ಗೌರವಿಸುವ ಪಂದ್ಯಾವಳಿಯಾಗಿತ್ತು ಈ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ರೆಫ್ರಿ ನೀಡಿದ ವಿವಾದಾತ್ಮಕ ನಿರ್ಧಾರದಿಂದ ಎರಡು ತಂಡಗಳ ಅಭಿಮಾನಿಗಳ ನಡುವೆ ಘರ್ಷಣೆ ಹುಟ್ಟಲು ಕಾರಣವಾಯಿತು, ರೆಫ್ರಿ ಮೇಲೆ ಆಕ್ರೋಶಗೊಂಡ ಒಂದು ತಂಡದ ಅಭಿಮಾನಿಗಳು ಫುಟ್ಬಾಲ್ ಅಂಗಣಕ್ಕೆ ಪ್ರವೇಶಿಸಿ ಗಲಭೆ ಎಬ್ಬಿಸಿದ್ದು ಇದಕ್ಕೆ ಪ್ರತಿಯಾಗಿ ಇನ್ನೊಂದು ತಂಡದ ಅಭಿಮಾನಿಗಳು ಅಂಗಣ ಪ್ರವೇಶಿಸಿ ಗದ್ದಲ ಎಬ್ಬಿಸಿದ್ದಾರೆ ಈ ನಡುವೆ ಎರಡು ತಂಡಗಳ ಅಭಿಮಾನಿಗಳ ನಡುವೆ ಘರ್ಷಣೆ ನಡೆದು ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದಾಡಿಕೊಂಡಿದ್ದಾರೆ ಪರಿಣಾಮ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಅಷ್ಟು ಮಾತ್ರವಲ್ಲದೆ ಉದ್ರಿಕ್ತರ ಗುಂಪು ಎನ್‌ಜೆರೆಕೋರ್ ನಲ್ಲಿರುವ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಇನ್ನು ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿ ಎಲ್ಲಿ ನೋಡಿದರೂ ಮೃತದೇಹಗಳೇ ಕಾಣುತ್ತಿವೆ ಮೃತದೇಹ ಇಡಲು ಜಾಗ ಇಲ್ಲದೆ ಆಸ್ಪತ್ರೆಯ ವರಾಂಡದಲ್ಲಿ ಇರಿಸಲಾಗಿದೆ. ಅಲ್ಲದೆ ಗಂಭೀರ ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಬೆಡ್ ತುಂಬಿದ್ದು ಹೆಚ್ಚಿನವರನ್ನು ನೆಲದ ಮೇಲೆ ಮಲಗಿಸಿ ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.