ನವದೆಹಲಿ: 2021 ಅಂತ್ಯವಾಗಲು ಇನ್ನೇನು ಕೆಲ ದಿನಗಳಿರುವಾಗಲೇ ಝೊಮ್ಯಾಟೊ ಸಂಸ್ಥೆ ಈ ವರ್ಷದ ಕೆಲವು ವಿಶೇಷ ದಾಖಲೆಗಳನ್ನು ಹಂಚಿಕೊಂಡಿದೆ. ಅದರ ಪ್ರಕಾರ, ಈ ವರ್ಷ ಅತಿ ಹೆಚ್ಚು ಆರ್ಡರ್ ಮಾಡಲಾದ ಖಾದ್ಯ ಮೋಮೋಸ್.
ವಿಶ್ವಾದ್ಯಂತ ಒಟ್ಟು 1 ಕೋಟಿಗೂ ಅಧಿಕ ಮಂದಿ ಈ ವರ್ಷ ಮೋಮೋಸ್ ಆರ್ಡರ್ ಮಾಡಿ, ಮನೆಗೆ ತರಿಸಿಕೊಂಡು ತಿಂದಿದ್ದಾರಂತೆ. ಆದರೆ ಭಾರತದಲ್ಲಿ ಮಾತ್ರ ಅತಿಹೆಚ್ಚು ಆರ್ಡರ್ ಆದ ಖಾದ್ಯದಲ್ಲಿ ಬಿರಿಯಾನಿ ಅಗ್ರ ಸ್ಥಾನದಲ್ಲಿದೆ. ಪ್ರತಿ ಸೆಕೆಂಡಿಗೆ ಇಬ್ಬರಿಗೆ ಬಿರಿಯಾನಿ ಡೆಲಿವರಿ ಮಾಡಿದ್ದಾಗಿ ಸಂಸ್ಥೆ ಹೇಳಿದೆ.
ಅತಿ ಹೆಚ್ಚು ಆರ್ಡರ್ ಆದ ಖಾದ್ಯದಲ್ಲಿ 88 ಲಕ್ಷ ಆರ್ಡರ್‌ಗಳೊಂದಿಗೆ ದೋಸೆ ಎರಡನೇ ಸ್ಥಾನದಲ್ಲಿದೆ. ಸಮೋಸಾವನ್ನು 73 ಲಕ್ಷ ಮಂದಿ, ವಡಾ ಪಾವ್ ಅನ್ನು 32 ಲಕ್ಷ ಮಂದಿ ಆರ್ಡರ್ ಮಾಡಿದ್ದಾರೆ.
ಇದನ್ನೂ ಓದಿ:ಮನೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ :ಅಕ್ರಮವಾಗಿ ಸಂಗ್ರಹಿಸಿದ್ದ 8.280 ಲೀ. ಮದ್ಯ ವಶ
ಭಾರತೀಯರು ಅತಿ ಹೆಚ್ಚು ಇಷ್ಟ ಪಟ್ಟ ಜೋಡಿ ಎಂದರೆ “ಪನೀರ್ ಬಟರ್ ಮಸಾಲಾ ಮತ್ತು ಬಟರ್ ನಾನ್’. ಈ ಜೋಡಿಗೆ 11 ಲಕ್ಷ ಆರ್ಡರ್ ಬಂದಿದ್ದವಂತೆ. ಅಹಮದಾಬಾದ್‌ನ ವ್ಯಕ್ತಿಯೊಬ್ಬ ಒಮ್ಮೆಲೇ 33 ಸಾವಿರ ರೂ. ಮೌಲ್ಯದ ಆರ್ಡರ್ ಮಾಡಿ ದಾಖಲೆ ಬರೆದಿದ್ದ. ಶ್ವೇತಾ ಎಂಬ ಹೆಸರಿನ ಮಹಿಳೆ ಒಂದೇ ದಿನ 12 ಬಾರಿ ಐಸ್‌ಕ್ರೀಂ ಆರ್ಡರ್ ಮಾಡಿದ್ದಳು ಎಂದು ಸಂಸ್ಥೆ ಹೇಳಿಕೊಂಡಿದೆ.