ಹೆಚ್ಚು ಬಾರಿ ಧರಿಸದೇ ಇರುವ ಬಟ್ಟೆ ಹಾಗೂ ಫ್ಯಾನ್ಸಿ ವಸ್ತುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಎನ್‌ಜಿಓಗಳಿಗೆ ನೀಡಲು ಮುಂದಾದ ಸ್ಯಾಂಡಲ್‌ವುಡ್ ನಟಿಯರ ಹೊಸ ಕಾನ್ಸೆಪ್ಟ್ ಬಗ್ಗೆ ನಿಮಗೆ ಗೊತ್ತೇ ಇದೆ. ತಮ್ಮ ವಾರ್ಡ್‌ರೋಬ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಹಾಗೂ ಹೆಚ್ಚು ಬಾರಿ ಧರಿಸದೇ ಇರುವ ಬಟ್ಟೆಗಳನ್ನು ಮಾರಾಟ ಮಾಡುವ “ದಿ ವ್ಯಾನಿಟಿ ಟ್ರಂಕ್ ಸೇಲ್’ ಭಾನುವಾರ ನಡೆದಿದೆ.
ರೆಸಿಡೆನ್ಸಿ ರೋಡ್‌ನಲ್ಲಿರುವ ಬಿ ಹೈವ್ ವರ್ಕ್‌ಶಾಪ್‌ನಲ್ಲಿ ಈ ಸೇಲ್ ನಡೆದಿದ್ದು, ನಟಿಮಣಿಯರ ಈ ಕಾನ್ಸೆಪ್ಟ್ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಒಂದು ಗಂಟೆಯೊಳಗಾಗಿ ಎಲ್ಲಾ ವಸ್ತುಗಳು ಮಾರಾಟವಾಗುವ ಮೂಲಕ ನಟಿಯರ ಮೊಗದಲ್ಲಿ ಮಂದಹಾಸ ಮೂಡಿದೆ. ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಮಾರಾಟದ ಅವಧಿಯಾಗಿತ್ತು. ಆದರೆ, ಮಾರಾಟ ಆರಂಭವಾದ ಒಂದು ಗಂಟೆಯೊಳಗಾಗಿ ಎಲ್ಲಾ ವಸ್ತುಗಳು ಮಾರಾಟವಾಗಿವೆ.
ಈ ಶಾಪಿಂಗ್‌ನಲ್ಲಿ ಪಾಲ್ಗೊಳ್ಳುವವರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿತ್ತು. ನೋಂದಣಿಯಾದವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. 1200 ಮಂದಿ ಈ ಶಾಪಿಂಗ್‌ನಲ್ಲಿ ಪಾಲ್ಗೊಂಡು ನಟಿಮಣಿಯರ ಬಟ್ಟೆ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸಿದ್ದಾರೆ. ಅಂದಹಾಗೆ ಇದು ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಸೇಲ್.
“ದಿ ವ್ಯಾನಿಟಿ ಟ್ರಂಕ್ ಸೇಲ್’ ಕಾನ್ಸೆಪ್ಟ್ನಡಿಯ ಮಾರಾಟದಿಂದ =ಒಂದು ಲಕ್ಷ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿದ್ದು, ಮಾರಾಟದ ವೇಳೆಯ ಖರ್ಚುವೆಚ್ಚಗಳನ್ನು ಹೊರತುಪಡಿಸಿ ಉಳಿದ ಹಣವನ್ನು ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್‌ಗಳಿಗೆ ಸಂದಾಯ ಮಾಡಲಿದ್ದಾರೆ ಈ ನಟಿಯರು. ಸುಮಾರು 80 ಸಾವಿರಕ್ಕೂ ಅಧಿಕ ಹಣ ಸಂದಾಯವಾಗಲಿದೆ.
ಈ ಸೇಲ್‌ನಲ್ಲಿ ಶ್ರದ್ಧಾ ಶ್ರೀನಾಥ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್‍ನಾಡು, ಸೋನು ಗೌಡ, ಮಾನ್ವಿತಾ ಹರೀಶ್, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವಾತ್ಸ, ಸಂಗೀತಾ ಭಟ್, ಪ್ರಜ್ಞಾ ಭಾಗವಹಿಸಿದ್ದಾರೆ. ಅಂದಹಾಗೆ, ಇದು ಶ್ರುತಿ ಹರಿಹರನ್ ಅವರ ಕಾನ್ಸೆಪ್ಟ್ ಆಗಿದ್ದು, ಶೃತಿ ಹರಿಹರನ್ ತಮ್ಮ ವಾರ್ಡ್‌ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಅವರಿಗೆ ಈ ಯೋಚನೆ ಬಂತಂತೆ.