ಹುಬ್ಬಳ್ಳಿ: ಹಾವೇರಿಯಲ್ಲಿ ಕಳೆದ 25 ವರ್ಷಗಳಿಂದ ಮತದಾನ ಹಕ್ಕು ಹೊಂದಿದ್ದೇನೆ. ವಿಧಾನ ಪರಿಷತ್ತು ಸದಸ್ಯನಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಎರಡು ಬಾರಿ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದೇನೆ. ಹೀಗಿರುವಾಗ ಹೊರಗಿನವರು ಎನ್ನುವ ಪ್ರಶ್ನೆ ಬರಲ್ಲ. ಕಳೆದ ನಾಲ್ಕು ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವುದನ್ನು ಗಮನಿಸಿ ಪಕ್ಷ ಅವಕಾಶ ನೀಡಿದೆ ಎಂದು ವಿಧಾನ ಪರಿಷತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇಂತಹ ವಿಚಾರಗಳನ್ನು ನಮ್ಮ ವಿರೋಧಿಗಳು ಹರಿಬಿಡುತ್ತಾರೆ. ಆದರೆ ನಾನು ಎಷ್ಟು ವರ್ಷದಿಂದ ಕ್ಷೇತ್ರದಲ್ಲಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಅಮೆರಿಕದಲ್ಲಿ 10 ವರ್ಷ ನೆಲೆಸಿದರೆ ಅಲ್ಲಿನ ಪೌರತ್ವ ದೊರೆಯುತ್ತದೆ. ಆದರೆ ನಾನು ಹಾವೇರಿಯಲ್ಲಿ 25 ವರ್ಷಗಳಿಂದ ಇದ್ದೇನೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಸೈಡ್‌ಲೈನ್ ಮಾಡಲು ಈ ಚುನಾವಣೆ ತಮಗೆ ಟಿಕೆಟ್ ನೀಡಲಾಗಿದೆ ಎಂಬುದು ಶುದ್ಧ ಸುಳ್ಳು. ಕಳೆದ ನಾಲ್ಕು ದಶಕಗಳಿಂದ ಪಕ್ಷಕ್ಕೆ ಸಲ್ಲಿಸಿದ ಸೇವೆ ಫಲವಾಗಿ ಈ ಅವಕಾಶ ನೀಡಿದೆ. ಟಿಕೆಟ್ ಬಯಸಿದವರು ಕೂಡ ಈ ಚುನಾವಣೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಪಕ್ಷದ ಎಂದ ಮೇಲೆ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಸಹಜ. ಆದರೆ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರ ಚುನಾವಣೆ ಕೆಲಸ ಮಾಡುವುದು ನಮ್ಮ ಮುಖಂಡರ, ನಾಯಕರ ಕಾರ್ಯವಾಗಿದೆ. ಟಿಕೆಟ್ ವಿತರಣೆಯಲ್ಲಿ ಯಾವುದೇ ಗೊಂದಲ, ಅಸಮಾಧಾನವಿಲ್ಲ.
ಮುಖಂಡ ಇಸ್ಮಾಯಿಲ್ ತಮಟಗಾರ ಎಐಎಂಐಎಂ ಪಕ್ಷ ಸೇರುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದರು. ಬಿಜೆಪಿ ದುರಾಡಳಿತ, ಬೆಲೆ ಏರಿಕೆ, ರೈತ ವಿರೋಧಿ ಕಾಯ್ದೆಗಳು, ಸುಳ್ಳು ಭರವಸೆಗಳು, ನಿರುದ್ಯೋಗ ಸೇರಿದಂತೆ ಭ್ರಷ್ಟಾಚಾರ ವಿರುದ್ಧ ಚುನಾವಣೆ ಇದಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಹೆಚ್ಚಿಸಿ ಜನ ಸಾಮಾನ್ಯರನ್ನು ಬೀದಿ ತಂದಿದ್ದಾರೆ. ಬಿಜೆಪಿ ಅಧಿಕಾರದಿಂದ ಏನೋ ಅಭಿವೃದ್ಧಿಯಾಗುತ್ತದೆ ಎಂದವರಿಗೆ ಭ್ರಮನಿರಸವಾಗಿದೆ. ಕೇಂದ್ರ ಸೇರಿದಂತೆ ರಾಜ್ಯದಲ್ಲೂ ಕೂಡ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಇವರ ಆಡಳಿತದಲ್ಲಿ ಒಂದಾದರೂ ಜನಪರ ಯೋಜನೆ ಕೊಟ್ಟಿರುವ ಉದಾಹರಣೆಗಳು ಇವೆಯಾ?ಬರೀ ಸುಳ್ಳು ಭರವಸೆಗಳನ್ನು ನೀಡುತ್ತಾ ದಿನ ದೂಡುತ್ತಿದೆ. ಈ ಎಲ್ಲಾ ಅಂಶಗಳು ಬಿಜೆಪಿಗೆ ತಿರುಗೇಟು ನೀಡಲು ಮತದಾರರು ಮುಂದಾಗಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯಿಂದ ರೈತರು ಸಂಪೂರ್ಣ ಬೆಳೆಯನ್ನು ಕಳೆದುಕೊಂಡಿದ್ದಾರೆ. ಒಬ್ಬ ಸಚಿವರು ಜಿಲ್ಲೆಗಳಿಗೆ ತೆರಳಿ ಕೆಲಸ ಮಾಡುತ್ತಿಲ್ಲ. ಬೆಳೆ ಕಳೆದಕೊಂಡ ರೈತರಿಗೆ ಸಾಂತ್ವನ, ಧೈರ್ಯ ಹೇಳುವ ಕೆಲಸ ಸರಕಾರದಿಂದ ನಡೆಯುತ್ತಿಲ್ಲ. ಮನೆ ಕಳೆದುಕೊಂಡವರು ಬೀದಿಗೆ ಬಂದಿದ್ದಾರೆ. ಅವರಿಗೆ ಪರಿಹಾರ, ಮನೆ ನಿರ್ಮಾಣದಂತಹ ಕಾರ್ಯಕ್ಕೆ ಸರಕಾರ ಮುಂದಾಗುತ್ತಿಲ್ಲ. ನಿಗದಿತ ವೇಳೆಯಲ್ಲಿ ಜಿಪಂ, ತಾಪಂ ಚುನಾವಣೆ ನಡೆಸುವಂತೆ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ
ಮಾಡಿದರೂ ಕಿವಿಗೊಡಲಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದ ಬಿಜೆಪಿ ಸರಕಾರ ಇದನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ರಾಜ್ಯದ ಹಲವಡೆ ಜಿಪಂ-ತಾಪಂ ಚುನಾವಣೆಗಳು ನಡೆದಿಲ್ಲ ಎಂದು ದೂರಿದರು.
ಮಾಜಿ ಸಚಿವ ಸಂತೋಷ ಲಾಡ್, ಶಾಸಕರಾದ ಶ್ರೀನಿವಾಸ ಮಾನೆ, ಕುಸುಮಾವತಿ ಶಿವಳ್ಳಿ, ಮುಖಂಡರಾದ ನಾಗರಾಜ ಛಬ್ಬಿ, ಅಲ್ತಾಫ್ ಹಳ್ಳೂರು, ಅನೀಲಕುಮಾರ ಪಾಟೀಲ, ಆರ್ .ವಿ.ವೆಂಕಟೇಶ, ಎಂ.ಎಸ್.ಅಕ್ಕಿ, ಸದಾನಂದ ಡಂಗನವರ, ಸಯೀದ್ ಅಹ್ಮದ್, ಬಂಗಾರೇಶ ಹಿರೇಮಠ, ನಾಗರಾಜ ಗೌರಿ, ಎಫ್.ಎಚ್.ಜಕ್ಕಪ್ಪನವರ ಇನ್ನಿತರರಿದ್ದರು.