Advertisement

ಪತಿಯ ಗುಂಡೇಟಿಗೆ ಪತ್ನಿಯ ಪ್ರಿಯಕರ ದಾರುಣ ಬಲಿ!

03:50 AM Jan 14, 2017 | Team Udayavani |

ಬೆಂಗಳೂರು: ರಾಜಧಾನಿಯ ಅನೈತಿಕ ಸಂಬಂಧವೊಂದು ಶೂಟೌಟ್‌ನಲ್ಲಿ ಅಂತ್ಯವಾಗಿದ್ದು, ಪತ್ನಿಯ ಪ್ರಿಯಕರನ ಮೇಲೆ ಪತಿರಾಯನೊಬ್ಬ ತನ್ನ ತಂದೆ ಜತೆಗೂಡಿ ಗುಂಡಿನ ದಾಳಿ ನಡೆಸಿದ್ದಾನೆ. ಇದರ ಬೆನ್ನಲ್ಲೇ ಪ್ರಿಯಕರನನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ದಾಖಲಿಸಿದ ಪತ್ನಿ, ಬಳಿಕ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅತ್ತ ಪ್ರಿಯಕರನೂ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾನೆ. ಹೀಗಾಗಿ ಅಕ್ರಮ ಸಂಬಂಧ ಎರಡು ಬಲಿ ಪಡೆದಂತಾಗಿದೆ.

Advertisement

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿನ ಆಚಾರ್ಯ ಕಾಲೇಜು ಸಮೀಪ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಹೆಸರುಘಟ್ಟದ ಎಂಇಐ ಲೇಔಟ್‌ ನಿವಾಸಿ ವಕೀಲ ಅಮಿತ್‌ (32) ಗುಂಡೇಟಿಗೆ ಬಲಿಯಾಗಿದ್ದರೆ, ಕಗ್ಗಲೀಪುರ ನಿವಾಸಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶ್ರುತಿಗೌಡ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮಿತ್‌ ಮೇಲೆ ಗುಂಡಿನ ದಾಳಿ ನಡೆಸಿದ ಶ್ರುತಿ ಪತಿ ರಾಜೇಶ್‌ (31) ಹಾಗೂ ಮಾವ ಗೋಪಾಲಕೃಷ್ಣ (78) ಪೊಲೀಸರಿಗೆ ಶರಣಾಗಿದ್ದು, ಅವರನ್ನು ವಿಚಾರಣೆಗೊಳಪಡಿಸಲಾಗಿದೆ.

ಆಗಿದ್ದೇನು?:
ನೆಲಮಂಗಲ ವಕೀಲರ ಸಂಘದ ಅಧ್ಯಕ್ಷರಾಗಿರುವ ಕೇಶವಮೂರ್ತಿ ಅವರ ಪುತ್ರರಾಗಿರುವ ಅಮಿತ್‌, ವೃತ್ತಿಯಲ್ಲಿ ವಕೀಲರು. ಪತ್ನಿ ಮತ್ತು ಮಗು ಜತೆ ಹೆಸರುಘಟ್ಟದ ಮುಖ್ಯರಸ್ತೆ ಬಳಿ ವಾಸವಿದ್ದರು. ರೈಲ್ವೆ ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಆಗಿದ್ದ ಶ್ರುತಿಗೌಡ ಜತೆ ಅಮಿತ್‌ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ರಾಜೇಶ್‌ ಅವರನ್ನು ವರಿಸಿದ್ದ ಶ್ರುತಿ, ಅಮಿತ್‌ ಜತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದು ಮನೆಯವರಿಗೂ ಗೊತ್ತಾಗಿ ಗಲಾಟೆ ನಡೆದಿತ್ತು. ಶ್ರುತಿಗೆ ಕುಟುಂಬಸ್ಥರು ಎಚ್ಚರಿಕೆಯನ್ನೂ ನೀಡಿದ್ದರು ಎಂದು ಹೇಳಲಾಗಿದೆ.

ಈ ಮಧ್ಯೆ, ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಹೇಳಿ ಪ್ರಿಯಕರನನ್ನು ಭೇಟಿ ಮಾಡಲು ಶ್ರುತಿ ಶುಕ್ರವಾರ ಮನೆಯಿಂದ ಕಾರಿನಲ್ಲಿ ಹೊರಟಿದ್ದಾರೆ. ಆಗ ಅನುಮಾನಗೊಂಡ ಪತಿ ರಾಜೇಶ್‌ ಹಾಗೂ ಆತನ ತಂದೆ ಗೋಪಾಲಕೃಷ್ಣ ಮತ್ತೂಂದು ಕಾರಿನಲ್ಲಿ ಶ್ರುತಿಯನ್ನು ಹಿಂಬಾಲಿಸಿದ್ದಾರೆ. ಇದು ಗೊತ್ತಿಲ್ಲದ ಶ್ರುತಿ, ಅಮಿತ್‌ರನ್ನು ಆಚಾರ್ಯ ಕಾಲೇಜು ಬಳಿ ಭೇಟಿಯಾಗಿ, ಕಾರಿನಲ್ಲೇ ಮಾತನಾಡುತ್ತಾ ಕುಳಿತಿದ್ದಾರೆ. ಆಗ ಇಬ್ಬರನ್ನೂ ಕಂಡ ಗೋಪಾಲಕೃಷ್ಣ ಹಾಗೂ ಅವರ ಪುತ್ರ ಏಕಾಏಕಿ ತಮ್ಮ ಬಳಿ ಇದ್ದ ಪರವಾನಗಿ ಹೊಂದಿದ್ದ ಪಿಸ್ತೂಲ್‌ನಿಂದ ಅಮಿತ್‌ ಎದೆಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 

Advertisement

ಕೂಡಲೇ ರಕ್ತದ ಮಡುವಿಗೆ ಜಾರಿದ ಅಮಿತ್‌ನನ್ನು ಶ್ರುತಿಗೌಡ ತುಮಕೂರು ರಸ್ತೆಯ 8ನೇ ಮೈಲಿ ಬಳಿಯಿರುವ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ದಾಖಲೆ ಪುಸ್ತಕದಲ್ಲಿ ಗಾಯಾಳು ಹೆಸರು ನಮೂದಿಸುವಾಗ ಅಮಿತ್‌ ಎಂದು ಬರೆಸಿ, ಶ್ರುತಿ ಹೊರಬಂದಿದ್ದಾರೆ. ಚಿಕಿತ್ಸೆ ಫ‌ಲಿಸದೆ ಅಮಿತ್‌ ಮೃತಪಟ್ಟ ಹಿನ್ನೆಲೆಯಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದ ಮಹಿಳೆಗೆ ವಿಷಯ ತಿಳಿಸಲು ವೈದ್ಯರು ಯತ್ನಿಸಿದ್ದಾರೆ. ಆಗ ಆಸ್ಪತ್ರೆಯಲ್ಲಿ ಶ್ರುತಿ ಇಲ್ಲದ್ದನ್ನು ತಿಳಿದ ವೈದ್ಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಆಸ್ಪತ್ರೆಯ ಸಿಸಿಟಿವಿಯ ದೃಶ್ಯಾವಳಿ ಪರಿಶೀಲಿಸಿದ್ದು, ಮಹಿಳೆಯ ಚಹರೆ ಪತ್ತೆ ಹಚ್ಚಿದ್ದಾರೆ. ಅಷ್ಟರಲ್ಲಿ ಆಸ್ಪತ್ರೆ ಸಮೀಪದ ಲಾಡ್ಜ್ನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯೇ ಅಮಿತ್‌ನನ್ನು ಆಸ್ಪತ್ರೆಗೆ ಸೇರಿಸಿದವರು ಎಂಬುದು ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಾದ ಬಳಿಕ ರಾಜೇಶ್‌ ಹಾಗೂ ಗೋಪಾಲಕೃಷ್ಣ ಅವರು ಪೊಲೀಸರೆದುರು ಶರಣಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next